ಗುಂಡ್ಲುಪೇಟೆ: ಆಷಾಢ ಮಾಸ ನಾಲ್ಕನೇ ಶುಕ್ರವಾರ ಪ್ರಯುಕ್ತ ಪಟ್ಟಣದ ಗ್ರಾಮದ ದೇವತೆ ಪಟ್ಟಲದಮ್ಮ ದೇವಿಯ ಆರಾಧನೆ ಹಾಗು 13ನೇ ವರ್ಷದ ಆಷಾಢ ಪೂಜೆ ವಿಜೃಂಭಣೆಯಿಂದ ನಡೆಯಿತು.
ಪಟ್ಟಣದ ಹೊರ ವಲಯದಲ್ಲಿರುವ ಪಟ್ಟಲದಮ್ಮ ದೇವಸ್ಥಾನವನ್ನು ಆಷಾಢಮಾಸದ ಹಿನ್ನೆಲೆ ತಳಿರು ತೋರಣಗಳಿಂದ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದಲೇ ಪ್ರಧಾನ ಅರ್ಚಕ ಕಣ್ಣಪ್ಪ ಜೋಯಿಸಿ ಮತ್ತು ಶಂಕರ್ ನಾರಾಯಣ ಜೋಯಿಸಿ ನೇತೃತ್ವದಲ್ಲಿ ಪೂಜೆ ಮತ್ತು ದೇವತಾ ಕಾರ್ಯಗಳು ನಡೆಸಿದರು. ಜೊತೆಗೆ ವಿವಿಧ ಬಗ್ಗೆಯ ಹೂಗಳಿಂದ ಪಟ್ಟಲದಮ್ಮ ದೇವಿಯ ಮೂಲ ವಿಗ್ರಹಕ್ಕೆ ಬೆಣ್ಣೆ ಅಲಂಕಾರ, ಮಹಾಲಕ್ಷ್ಮಿ ಅಲಂಕಾರ, ನಾಗಭರಣ ಅಲಂಕಾರ, ಮುತ್ತಿನ ಅಲಂಕಾರ, ಶೇಷವಾಹನ ಅಲಂಕಾರ, ಉತ್ಸವ ಮೂರ್ತಿಗೆ ಶೇಷವಾಹ ಸಿಂಹವಾಹನ ಸಹಿತ ಅಲಂಕಾರ ಮಾಡಲಾಯಿತು.

ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ಆಷಾಢ ಶುಕ್ರವಾರದಂದು ದೇವಿಯ ದರ್ಶನ ಪಡೆದರು. ಮುತ್ತೈದೆಯರು ದೇವಾಲಯದ ಮುಂಭಾಗದಲ್ಲಿ ದೇವಿಗೆ ನಿಂಬೆ ಹಣ್ಣಿನ ದೀಪ ಆರತಿ ಬೆಳಗಿ ಹರಿಶಿನ ಕುಂಕುಮ ಹಾಗೂ ಬಾಗಿನವನ್ನು ವಿನಿಯೋಗ ಮಾಡಿಕೊಂಡರು.
ಅನ್ನ ಸಂತರ್ಪಣೆ: ದೇವಸ್ಥಾನದ ಆಡಳಿತ ಮಂಡಳಿ ಹಾಗು ನಾಯಕ ಸಮುದಾಯದ ವತಿಯಿಂದ ಪ್ರತಿ ವರ್ಷದಂತೆ ಈ ಸಲವೂ ಕುಡ ಸಾವಿರಾರು ಮಂದಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ನಾಯಕ ಸಮುದಾಯದ ಯಜಮಾನರು, ಮುಖಂಡರು ಹಾಗೂ ಯುವಕರು ಹಾಜರಿದ್ದರು.