ಮೈಸೂರು: ಆಷಾಢ ಮಾಸದ ಎರಡನೇ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ನಾನಾ ಕಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಹಾಗೂ ಹಲವು ಗಣ್ಯರು ನಾಡದೇವತೆಯ ದರ್ಶನ ಪಡೆದು ಪುನೀತರಾದರು.
ಶುಕ್ರವಾರ ಮುಂಜಾನೆಯಿಂದಲೇ ರಾಜ್ಯದ ಮೂಲೆ ಮೂಲೆಯಿಂದ ಬೆಟ್ಟಕ್ಕೆ ಆಗಮಿಸಿದ್ದ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಜಯಘೋಷ ಕೂಗುತ್ತ ಚಾಮುಂಡೇಶ್ವರಿ ದರ್ಶನ ಪಡೆದರು. ಸಾರ್ವಜನಿಕರ ವಾಹನಕ್ಕೆ ನಿರ್ಬಂಧ ವಿದಿಸಿದ್ದರಿಂದ ಲಲಿತ ಮಹಲ್ ಬಳಿಯಿಂದ ಬಸ್ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಮಂದಿ ಮೆಟ್ಟಿಲುಗಳ ಮೂಲಕ ಬೆಟ್ಟಕ್ಕೆ ಬಂದು ಭಕ್ತಿಭಾವ ಮೆರೆದರು. ೫೦, ೧೦೦ ಹಾಗೂ ೩೦೦ ರೂ ವಿಶೇಷ ದರ್ಶನದ ಸರತಿ ಸಾಲಿನಲ್ಲೂ ಹೆಚ್ಚು ಜನ ಕಂಡುಬಂದರು. ಮೊದಲ ವಾರಕ್ಕಿಂತ ಎರಡನೇ ವಾರ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.
ಮುಂಜಾನೆಯಿಂದಲೇ ಪೂಜೆ: ಎರಡನೇ ಆಶಾಢ ಶುಕ್ರವಾರದ ಹಿನ್ನೆಲೆಯಲ್ಲಿ ಮುಂಜಾನೆ ೩ ಗಂಟೆಯಿಂದಲೇ ಬೆಟ್ಟದಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊಂಡವು. ಪ್ರತಿ ವಾರದಂತೆ ಮೊದಲಿಗೆ ದೇವಿಗೆ ಅಭಿಷೇಕ, ರುದ್ರಾಭೀಷೇಕ, ಪಂಚಾಮೃತ ಅಭಿಷೇಕ ಸಲ್ಲಿಸಿದ ಬಳಿಕ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ನಂತರ ಬೆಳಗ್ಗೆ ೧೧ ಗಂಟೆಗೆ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಸಿಂಹವಾಹಿನಿ ಅಲಂಕಾರ: ಆಷಾಢ ಮಾಸದ ಪ್ರತಿ ಶುಕ್ರವಾರಗಳಲ್ಲೂ ಚಾಮುಂಡೇಶ್ವರಿಗೆ ವಿವಿಧ ರೀತಿಯ ಅಲಂಕಾರಗಳನ್ನು ಮಾಡಲಿದ್ದು, ಈ ವಾರ ದೇವಿಗೆ ಸಿಂಹವಾಹಿನಿ ಅಲಂಕಾರ ಮಾಡಲಾಗಿತ್ತು. ಗುಲಾಬಿ ಬಣ್ಣದ ಸೀರೆಯನ್ನುಟ್ಟು, ಸಿಂಹವಾಹಿನಿಯಾಗಿ, ವಿವಿಧ ಹೂವುಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿದ್ದ ಚಾಮುಂಡೇಶ್ವರಿಯನ್ನು ಕಂಡು ಭಕ್ತರು ಪುನೀತರಾದರು. ಅಮ್ಮನ ಉತ್ಸವ ಮೂರ್ತಿಗೆ ನೀಲಿ ಬಣ್ಣದ ಸೀರೆಯನ್ನುಡಿಸಲಾಗಿತ್ತು. ದೇವಸ್ಥಾನವನ್ನು ವಿವಿಧ ಬಗೆಯ ಹೂಗಳಿಂದ ಸಿಂಗರಿಸಲಾಗಿತ್ತು.
ಗಣ್ಯರಿಂದ ದರ್ಶನ: ೨ನೇ ಆಷಾಢ ಶುಕ್ರವಾರದಂದು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದ ಅಸಂಖ್ಯಾತ ಭಕ್ತರೊಂದಿಗೆ ಹಲವು ಗಣ್ಯರು ದೇವಿಯ ದರ್ಶನ ಪಡೆದರು. ಪ್ರಮುಖವಾಗಿ ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕ ಎಂಟಿಬಿ ನಾಗರಾಜ್, ಎಂಎಲ್‌ಸಿ ಸೂರಜ್ ರೇವಣ್ಣ, ನಟರಾದ ಡಾಲಿ ಧನಂಜಯ್, ಧನ್ವೀರ್ ಸೇರಿದಂತೆ ಹಲವು ಗಣ್ಯರು ಬೆಟ್ಟಕ್ಕೆ ಭೇಟಿ ನೀಡಿ ಅಮ್ಮನ ದರ್ಶನ ಪಡೆದರು.
ಭಕ್ತರಿಗೆ ಪ್ರಸಾದದ ವ್ಯವಸ್ಥೆ: ಆಷಾಢ ಶುಕ್ರವಾರದ ಅಂಗವಾಗಿ ಬೆಟ್ಟಕ್ಕೆ ಭೇಟಿ ನೀಡಿದ ಭಕ್ತರಿಗೆ ಕಳೆದ ವಾರದಂತೆ ಅಚ್ಚುಕಟ್ಟಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕಳೆದ ೧೨ ವರ್ಷದಿಂದ ಪ್ರತಿ ವರ್ಷ ೨ನೇ ಆಷಾಢ ಶುಕ್ರವಾರದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿಸುವ ನಂಜನಗೂಡಿನ ಚಾಮುಂಡಿ ಟೌನ್‌ಷಿಪ್ ಹಾಗೂ ಕೊಯಮತ್ತೂರಿನ ದುರ್ಗಾ ಏಜೆನ್ಸಿಯ ಶಾಂತಿ ಮತ್ತು ತಂಬು ದಂಪತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ೬.೩೦ರಿಂದ ಆರಂಭವಾದ ಪ್ರಸಾದ ವಿತರಣೆ ರಾತ್ರಿ ೭.೩೦ರವರೆಗೂ ನಡೆಯಿತು.
ಬಿಜೆಪಿ ಅಧಿಕಾರಕ್ಕೆ ಬಂದಿದ್ದು ವಲಸಿಗರಿಂದ: ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಇಬ್ಬರು ಸಿಎಂ ಆಗಿದ್ದು ವಲಸಿಗರಿಂದಲೇ ಎಂದು ಮಾಜಿ ಶಾಸಕ ಎಂಟಿಬಿ ನಾಗಾರಾಜು ತಿಳಿಸಿದರು.
ಶುಕ್ರವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿಯ ದರ್ಶನ ಪಡೆದ ಬಳಿಕ ವಲಸಿಗರಿಂದಲೇ ಬಿಜೆಪಿ ಅಧಿಕಾರ ಕಳೆದುಕೊಂಡಿತು, ಪಕ್ಷ ಹಾಳಾಯಿತು ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ ವಲಸಿಗರು. ಅವರ ನೆರವಿಂದಲೇ ಒಬ್ಬರು ಸಿಎಂ ಆದರು. ಈಗ ನಮ್ಮಿಂದಲೇ ಅಧಿಕಾರಕ ಕಳೆದುಕೊಂಡೆವು, ಪಕ್ಷದಲ್ಲಿ ಶಿಸ್ತು ಹಾಳಾಯಿತು ಎಂಬುದು ಸರಿಯಲ್ಲ. ಈಶ್ವರಪ್ಪ ಪಕ್ಷದ ಹಿರಿಯ ನಾಯಕರು. ಯಾವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದರೋ ಗೊತ್ತಿಲ್ಲ. ಆದರೂ ಈ ರೀತಿ ಮಾತನಾಡಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ನಿನ್ನೆ ಆಷಾಢ ಏಕಾದಶಿ. ಇಂದು ಆಷಾಢ ಶುಕ್ರವಾರ. ಶುಭದಿನವಾದ್ದರಿಂದ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದೇನೆ. ಉತ್ತಮ ಮಳೆ ಬೆಳೆಯಾಗಿ ನಾಡಿನ ಜನತೆ ನೆಮ್ಮದಿಯಿಂದ ಇರಲೆಂದು ಪ್ರಾರ್ಥಿಸಿದ್ದೇನೆ ಎಂದರು.
ರಾಯಚೂರಿನಿಂದ ಬಂದ ಮಹಿಳೆಯರು: ಆಷಾಢ ಮಾಸದಲ್ಲಿ ಚಾಮುಂಡಿಬೆಟ್ಟಕ್ಕೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಬರುತ್ತಾರೆ. ಈ ಬಾರಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವಿರುವುದರಿಂದ ರಾಯಚೂರಿನಿಂದ ಮಹಿಳೆಯರ ತಂಡವೊಂದು ಬೆಟ್ಟಕ್ಕೆ ಬಂದಿತ್ತು. ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆಯಬೇಕೆಂಬ ಆಸೆಯಿತ್ತು. ಆದರೆ, ದುಡ್ಡಿನ ಕಾರಣದಿಂದ ಅದು ಸಾಧ್ಯವಾಗಿರಲಿಲ್ಲ. ಈ ಬಾರಿ ಬಸ್‌ನಲ್ಲಿ ಉಚಿತವಾಗಿ ಪ್ರಮಾಣ ಮಾಡುವ ಅವಕಾಶವಿರುವುದರಿಂದ ಬೆಟ್ಟಕ್ಕೆ ಬಂದು ತಾಯಿಯ ದರ್ಶನ ಪಡೆದಿದ್ದೇವೆ. ತುಂಬಾ ಖುಷಿಯಾಗುತ್ತಿದೆ ಎಂದು ಸಂತಸ ಹಂಚಿಕೊಂಡರು. ಚಾಮುಂಡೇಶ್ವರಿ ದರ್ಶನದ ಬಳಿಕ ಅರಮನೆ, ಮೃಗಾಲಯ ನೋಡಿಕೊಂಡು ವಾಪಸ್ ಊರಿಗೆ ತೆರಳುವುದಾಗಿ ತಿಳಿಸಿದರು.