ಬೆಂಗಳೂರು: ಅಪಘಾತಗಳನ್ನು ನಿಯಂತ್ರಿಸಲು ಸಂಚಾರಿ ಪೊಲೀಸರು ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ. ಬೆಂಗಳೂರಿನ ನೈಸ್ ರಸ್ತೆಯಲ್ಲಿ ವಾಹನಗಳ ವೇಗದ ಮಿತಿ ಅಳವಡಿಕೆ ಮಾಡಲಾಗಿದೆ. ಅಲ್ಲದೇ, ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆಯ ತನಕ ಬೈಕ್ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಆದೇಶ ಹೊರಡಿಸಿದ್ದಾರೆ.
ನೈಸ್ ರಸ್ತೆಯಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಈ ಕ್ರಮಕೈಗೊಂಡಿದೆ.
ನಿಯಮ ಪಾಲನೆ ಜೊತೆಗೆ ಮಾರ್ಗಸೂಚಿಗಳಿದ್ದರೂ ಸಹ ಅವುಗಳನ್ನು ವಾಹನ ಚಾಲಕರು ಪಾಲನೆ ಮಾಡುತ್ತಿಲ್ಲ. ಅಜಾಗರೂಕತೆ ಚಾಲನೆ, ನಿರ್ಲಕ್ಷ್ಯತೆಯಿಂದ ರಸ್ತೆ ಅಪಘಾತ ಹೆಚ್ಚಾಗುತ್ತಿವೆ. ಈ ಹಿನ್ನೆಲೆ ನೈಸ್ ರಸ್ತೆಯ ಸುತ್ತುಮುತ್ತಲಿನ ಒಟ್ಟು ಎಂಟು ಸಂಚಾರಿ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ವರದಿ ಆಧರಿಸಿ ಆಯುಕ್ತ ದಯಾನಂದ ಅವರು ಈ ಆದೇಶ ಹೊರಡಿಸಿದ್ದಾರೆ.
ನೈಸ್ ರಸ್ತೆಯಲ್ಲಿ ಸಂಭವಿಸುತ್ತಿರುವ ವಾಹನಗಳ ಅಪಘಾತಗಳ ಬಗ್ಗೆ ಕಾಮಾಕ್ಷಿ ಪಾಳ್ಯ, ಬ್ಯಾಟರಾಯನಪುರ, ಕೆಂಗೇರಿ, ಹುಳಿಮಾವು, ತಲಘಟ್ಟಪುರ, ಎಲೆಕ್ಟ್ರಾನಿಕ್ ಸಿಟಿ,ಜ್ನಾನಭಾರತಿ, ಕೆ.ಎಸ್ ಠಾಣೆಯ ಠಾಣಾಧಿಕಾರಿಗಳು ವರದಿ ನೀಡಿದ್ದರು. ಇವರ ವರದಿ ಆಧಾರದ ಮೇಲೆ ಈ ಕ್ರಮಕೈಗೊಳ್ಳಲಾಗಿದೆ. ಇನ್ನು ಈ ಆದೇಶದ ನಿಯಮ ಉಲ್ಲಂಘಿಸುವವರ ಮೇಲೆ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ಯಾವ ವಾಹನಕ್ಕೆ ಎಷ್ಟು ವೇಗದ ಮಿತಿ?
ಎಂಟಕ್ಕಿಂತ ಹೆಚ್ಚು ಪ್ರಯಾಣಿಕರು ಇರುವ ವಾಹನಗಳಿಗೆ 120 ಕಿಮೀ ವೇಗದ ಮಿತಿ ನಿಗದಿಪಡಿಸಲಾಗಿದೆ. 9 ಕ್ಕಿಂತ ಹೆಚ್ಚು ಪ್ರಯಾಣಿಕರು ಇರುವ ವಾಹನಗಳ ವೇಗದಿ ಮಿತಿ 100 ಕಿಮೀ ಇದೆ. ಗೂಡ್ಸ್ ವಾಹನಗಳು 80 ಕಿಮೀ ಹಾಗೂ ದ್ವಿಚಕ್ರ ವಾಹನಗಳಿಗೆ 80 ಕಿಮೀ ವೇಗದ ಮಿತಿ ನಿಗದಿ ಮಾಡಲಾಗಿದೆ.