Thursday, September 11, 2025
Google search engine

Homeಅಪರಾಧಕಾನೂನುಶೀಘ್ರ ನ್ಯಾಯ ಅದಾಲತ್‍ನಿಂದ ಸಾಧ್ಯ, ರಾಜಿಯಾಗಬಲ್ಲ 9916 ಪ್ರಕರಣಗಳ ಇತ್ಯರ್ಥಕ್ಕೆ ಗುರಿ: ನ್ಯಾಯಾಧೀಶೆ ಡಿ.ಕೆ.ವೇಲಾ

ಶೀಘ್ರ ನ್ಯಾಯ ಅದಾಲತ್‍ನಿಂದ ಸಾಧ್ಯ, ರಾಜಿಯಾಗಬಲ್ಲ 9916 ಪ್ರಕರಣಗಳ ಇತ್ಯರ್ಥಕ್ಕೆ ಗುರಿ: ನ್ಯಾಯಾಧೀಶೆ ಡಿ.ಕೆ.ವೇಲಾ

  • ಸೆ.13 ರಂದು ರಾಷ್ಟ್ರೀಯ ಲೋಕ ಅದಾಲತ್

ದಾವಣಗೆರೆ: ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದನ್ವಯ ಸೆಪ್ಟೆಂಬರ್ 13 ರಂದು ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಕೆ.ವೇಲಾ ತಿಳಿಸಿದರು.

ಜಿಲ್ಲಾ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕುರಿತಂತೆ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಡಿಮೆ ವೆಚ್ಚದಲ್ಲಿ ತ್ವರಿತವಾಗಿ ಇಬ್ಬರೂ ಕಕ್ಷಿದಾರರ ಒಪ್ಪಿಗೆಯಂತೆ ಸಮಾಧಾನ ತರುವಂತಹ ತೀರ್ಪು ನೀಡಲು ಜನತಾ ನ್ಯಾಯಾಲಯ ಜನರಿಗೆ ಬಹಳಷ್ಟು ಅನುಕೂಲಕರವಾಗಿದೆ. ಲೋಕ ಅದಾಲತ್‍ನಲ್ಲಿ ರಾಜಿಯಾಗುವ ಪ್ರಕರಣಗಳ ಮೇಲೆ ಯಾವುದೇ ಮೇಲ್ಮನವಿ ಹೋಗಲು ಅವಕಾಶ ಇರುವುದಿಲ್ಲ ಮತ್ತು ನ್ಯಾಯಾಲಯದ ತೀರ್ಪಿನಷ್ಟೆ ಮಹತ್ವತೆ ಇರುತ್ತದೆ. ರಾಜಿಯಾಗಬಲ್ಲ ಪ್ರಕರಣಗಳನ್ನು ಲೋಕ ಅದಾಲತ್‍ನಲ್ಲಿ ಬಗೆಹರಿಸಿಕೊಳ್ಳುವುದರಿಂದ ಸಮಯದ ಜೊತೆ ಹಣದ ಉಳಿತಾಯವಾಗಲಿದೆ ಎಂದರು.

ಜಿಲ್ಲೆಯಲ್ಲಿ ಎಲ್ಲಾ 25 ನ್ಯಾಯಾಲಯಗಳಿಂದ ಒಟ್ಟು 42701 ಪ್ರಕರಣಗಳು ಬಾಕಿ ಇರುತ್ತವೆ. ಇದರಲ್ಲಿ ರಾಜಿಯಾಗಬಲ್ಲ ಪ್ರಕರಣಗಳನ್ನು ಇತ್ಯರ್ಥ ಮಾಡಲು ಸೆಪ್ಟೆಂಬರ್ 13 ರಂದು ನಡೆಯುವ ಲೋಕ ಅದಾಲತ್‍ನಲ್ಲಿ 9916 ಪ್ರಕರಣಗಳನ್ನು ಇತ್ಯರ್ಥ ಮಾಡಲು ಗುರಿ ಹೊಂದಲಾಗಿದೆ. ಇದರಲ್ಲಿ ಈಗಾಗಲೇ 2863 ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥ ಮಾಡಿದ್ದು ಅಂತಿಮ ತೀರ್ಪಿನ ವರದಿ ಮಾಡಬೇಕಾಗಿದೆ ಎಂದರು.

ಲೋಕ ಅದಾಲತ್‍ಗೆ ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣ, ಬ್ಯಾಂಕ್ ಪ್ರಕರಣ, ಹಣ ವಸೂಲಾತಿ, ಸಿಬ್ಬಂದಿಗಳ ವೇತನ, ಕಾರ್ಮಿಕರ ವಿವಾದ, ವಿದ್ಯುತ್ ಬಿಲ್, ನೀರಿನ ಶುಲ್ಕ, ವೈವಾಹಿಕ ವಿವಾದ, ಭೂ ಸ್ವಾಧೀನ, ಕಂದಾಯ ಪ್ರಕರಣ, ಪಾಲು ವಿಭಾಗ, ಸಂಚಾರಿ ನಿಯಮಗಳ ಉಲ್ಲಂಘನೆ, ಜನನ ಮತ್ತು ಮರಣ ಸೇರಿದಂತೆ ರಾಜಿಯಾಗಬಲ್ಲ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುತ್ತದೆ. ಲೋಕ ಅದಾಲತ್‍ನಲ್ಲಿ ಭಾಗವಹಿಸಿ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಆಸಕ್ತಿ ಇರುವ ಕಕ್ಷಿದಾರರು ಇದರಲ್ಲಿ ಭಾಗವಹಿಸಲು ಮುಕ್ತ ಅವಕಾಶ ಇದೆ. ಲೋಕ ಅದಾಲತ್ ಯಶಸ್ಸಿಗೆ ವಕೀಲರ ಸಂಘ, ವಕೀಲರು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದರು.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ ಕಂದಾಯ ಇಲಾಖೆಯ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳನ್ನು 90 ದಿನಗಳಲ್ಲಿ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ನಿರ್ದೇಶನದಂತೆ ಪೌತಿ ಖಾತೆ ಆಂದೋಲನ ಪ್ರಾರಂಭಿಸಲಾಗಿದೆ. 92 ಸಾವಿರ ಪಹಣಿಗಳು ಮೃತ ಖಾತೆದಾರರ ಹೆಸರಿನಲ್ಲಿದ್ದು ಕಾನೂನು ಪ್ರಕಾರ ಬದುಕಿರುವ ವಾರಸುದಾರರ ಹೆಸರಿಗೆ ಜಂಟಿ ಖಾತೆ ಮಾಡಲಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಮಾತನಾಡಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸುಮಾರು 15 ಸಾವಿರ ಪ್ರಕರಣಗಳನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದ್ದು ಶೇ 50 ರಷ್ಟು ದಂಡ ಪಾವತಿಯೊಂದಿಗೆ ಸೆಪ್ಟೆಂಬರ್ 12 ರೊಳಗಾಗಿ ಇತ್ಯರ್ಥ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದರು.

ವಕೀಲರ ಸಂಘದ ಅಧ್ಯಕ್ಷರಾದ ಟಿ.ಆರ್.ಗುರುಬಸವರಾಜ್ ಮಾತನಾಡಿ ಲೋಕ ಅದಾಲತ್‍ಗೆ ಎಲ್ಲಾ ವಕೀಲರು ಸಹ ಸಲಹೆ ಸಹಕಾರ ನೀಡಿದ್ದಾರೆ .

RELATED ARTICLES
- Advertisment -
Google search engine

Most Popular