ಮೈಸೂರು: ಆಧುನಿಕ ಬದುಕಿನಲ್ಲಿ ವಿದ್ಯಾರ್ಥಿಗಳಿಗೆ ಒತ್ತಡ ಮತ್ತು ಸಮಯ ನಿರ್ವಹಿಸುವುದು ಒಂದು ಸವಾಲಾಗಿದೆ. ಕ್ರೀಡೆಯಿಂದ ಒತ್ತಡ ಮತ್ತು ಸಮಯವನ್ನು ಸಮರ್ಪಕವಾಗಿ ನಿರ್ವಹಿಸಬಹುದು. ವಿದ್ಯಾರ್ಥಿಗಳು ಇಂದು ಕ್ರೀಡೆಗೆ ಕೊಡುತ್ತಿರುವ ಸಮಯ ತುಂಬಾ ಕಡಿಮೆ. ಇದು ಬದಲಾಗಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ವೆಂಕಟೇಶ್ ಹೇಳಿದರು.
ಬಿ.ಎನ್.ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸ್ಮರಣಾರ್ಥ ಆಯೋಜಿಸಿದ್ದ ಅಂತರ ಕಾಲೇಜು ಪುರುಷರ ವಾಲಿಬಾಲ್, ಥ್ರೋಬಾಲ್ ಮತ್ತು ಬಾಲ್‌ಬ್ಯಾಡ್ಮಿಂಟನ್ ಹಾಗೂ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಕ್ರೀಡೆ ಹೆಚ್ಚು ಸಹಕಾರಿ. ಇಂದು ತಂತ್ರಜ್ಞಾನದಿಂದ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಒಂದು ಗಂಟೆ ಮೊಬೈಲ್ ಬಳಸುವುದಕ್ಕೂ ಒಂದು ಗಂಟೆ ಪುಸ್ತಕ ಓದುವುದಕ್ಕೂ ಒಂದು ಗಂಟೆ ಮೈದಾನದಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ ಮತ್ತು ಸಾಕಷ್ಟು ಪರಿಣಾಮಗಳಿವೆ ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಆರ್.ಮುಗೇಶಪ್ಪ ಮಾತನಾಡಿ, ಕ್ರೀಡೆ ವಿದ್ಯಾರ್ಥಿಗಳ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಗೇಮ್ಸ್‌ಗಳನ್ನು ಮೊಬೈಲ್‌ನಲ್ಲಿ ಆಡುವುದಕ್ಕಿಂತ ಮೈದಾನದಲ್ಲಿ ಆಡುವುದು ಮುಖ್ಯ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಅಕ್ಷರ ದಾಸೋಹ, ಅನ್ನ ದಾಸೋಹ, ಆರೋಗ್ಯ ದಾಸೋಹ, ಕಲಾ ದಾಸೋಹ, ಸಾಂಸ್ಕೃತಿಕ ದಾಸೋಹದಲ್ಲಿ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ಪ್ರಥಮ ಸ್ಮರಣೀಯರು. ಪೂಜ್ಯರ ಸ್ಮರಣಾರ್ಥವಾಗಿ ಇಂದು ಅಂತರ ಕಾಲೇಜು ಪಂದ್ಯಾವಳಿ ಆಯೋಜಿಸಲಾಗಿದೆ. ಸಮುದಾಯದ ಸೇವೆಯಲ್ಲಿ, ಆರೋಗ್ಯವಂತ ದೇಶದ ನಿರ್ಮಾಣದಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತಿದೆ. ಆಟೋಟ ಸಂಬಂಧವನ್ನು ಎಲ್ಲಾ ಕಾಲದಲ್ಲೂ ಎಲ್ಲಾ ವಯಸ್ಸಿನವರಲ್ಲೂ ನಾವು ಕಾಣುತ್ತೇವೆ. ಕೆಲವರು ಕ್ರೀಡಾಪಟುಗಳಾಗಿರುತ್ತಾರೆ, ಮತ್ತೆ ಕೆಲವರು ವೀಕ್ಷಕರಾಗಿರುತ್ತಾರೆ. ಇನ್ನೂ ಕೆಲವರು ಕ್ರೀಡೆಯ ಬಗ್ಗೆ ಬೇರೆಯವರಿಂದ ಮಾಹಿತಿ ಪಡೆಯುವವರಾಗಿರುತ್ತಾರೆ. ಒಂದಿಲ್ಲೊಂದು ರೀತಿಯಲ್ಲಿ ಜನತೆ ಕ್ರೀಡೆಯೊಂದಿಗೆ ಸಂಬಂಧ ಹೊಂದಿರುತ್ತಾರೆ. ಕ್ರೀಡೆ ದೇಹವನ್ನು ಸದೃಢವಾಗಿಸುತ್ತದೆ. ಜೊತೆಗಾರರಲ್ಲಿ ಪರಸ್ಪರ ವಿಶ್ವಾಸ, ನಂಬಿಕೆ ಮೂಡಿಸುತ್ತದೆ. ಸೋಲನ್ನು ಗೌರವಯುತವಾಗಿ ಸ್ವೀಕರಿಸುವ ಮನೋಭಾವ ಕಲಿಸುತ್ತದೆ. ಬುದ್ಧಿಶಕ್ತಿ, ಆತ್ಮಗೌರವ, ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಆರೋಗ್ಯವಂತ ಬದುಕನ್ನು ನೀಡುತ್ತದೆ. ಮುಖ್ಯವಾಗಿ ಬದುಕಿನಲ್ಲಿ ಶಿಸ್ತು ಮತ್ತು ಸಮಯ ಪ್ರಜ್ಞೆ ಬೆಳೆಸುತ್ತದೆ. ಆ ಕಾರಣಕ್ಕೆ ಇಂತಹ ಬದುಕಿನ ಸರ್ವತೋಮುಖ ಆರೋಗ್ಯಕ್ಕೆ ಸಹಕಾರಿಯಾಗುವ ಪಂದ್ಯಾವಳಿಗಳಲ್ಲಿ ನೀವುಗಳು ಭಾಗವಹಿಸುತ್ತಿದ್ದೀರಿ ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ವಿವಿಧ ಕಾಲೇಜುಗಳ ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಪಿ.ವಿಜಯೇಂದ್ರ ಕುಮಾರ್, ಡಾ.ಎಲ್.ವಿನಯ್‌ಕುಮಾರ್, ಇತಿಹಾಸ ವಿಭಾಗದ ಡಾ.ಎ.ಜಿ.ಧರ್ಮೇಶ್ ಹಾಜರಿದ್ದರು.