ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತರ ಬಳಗದ ವತಿಯಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಪೂಜಾ ಮಹೋತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅತ್ಯಂತ ವಿಜ್ರಂಬಣೆಯಿಂದ ನಡೆಯಿತು.
ಗ್ರಾಮದ ಹೊರವಲಯದಲ್ಲಿರುವ ಕಾಳನಕಟ್ಟೆ ಕೆರೆಯಿಂದ ತೆರೆದ ವಾಹನದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಾವಚಿತ್ರವನ್ನು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ವಿವಿಧ ಬಣ್ಣ ತೊಟ್ಟು ಹಲವು ವೇಷಗಳೊಂದಿಗೆ ವಾದ್ಯಗೋಷ್ಠಿಗಳ ಜೊತೆಯಲ್ಲಿ ನೃತ್ಯ ಮಾಡುತ್ತಾ ಗ್ರಾಮದ ಪ್ರಮುಖರಸ್ತೆಯಲ್ಲಿ ಮೆರವಣಿಗೆ ನಡೆಸಿದರು.
ಗ್ರಾಮ ದೇವತೆ ಕಾಳಮ್ಮ ತಾಯಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಯ್ಯಪ್ಪ ಸ್ವಾಮಿಯ 18 ಮೆಟ್ಟಿಲುಗಳೊಂದಿಗೆ ಅಯ್ಯಪ್ಪ ಸ್ವಾಮಿಯ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿವಿಧ ಮಾದರಿಯ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಇದು ಸಾರ್ವಜನಿಕರ ಕಣ್ಮನ ಸೆಳೆಯುವುದರಲ್ಲಿ ಅತ್ಯಂತ ಯಶಸ್ವಿಯಾಯಿತು.
ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಇರುಮುಡಿಯನ್ನು ಕಟ್ಟಿ ನಂತರ ಕಜ್ಜಾಯ ತೆಗೆಯುವುದು ಹಾಗೂ ಕೊಂಡೋತ್ಸವವನ್ನು ಮಾಡಲಾಯಿತು.
ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣ ಕಾರ್ಯವನ್ನು ಮಾಡಲಾಯಿತು.
ಈ ಎಲ್ಲಾ ದೇವತಾ ಕಾರ್ಯದ ಹಿನ್ನೆಲೆಯಲ್ಲಿ ಇಡೀ ಗ್ರಾಮವೇ ಸಡಗರ ಸಂಭ್ರಮದಿಂದ ಕಂಗೊಳಿಸುತ್ತಿತ್ತು. ದೇವರ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥಿಸಿದರು.