ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಪರಿಸರ ಹಾಗೂ ನೀರಿನ ಸಂರಕ್ಷಣೆ ಕುರಿತು ಬೀದಿ ನಾಟಕ ಮೂಲಕ ಸಂಘದ ಸದಸ್ಯರು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಪಿರಿಯಾಪಟ್ಟಣ ಯೋಜನ ಕಚೇರಿ ಮಾರ್ಗದರ್ಶನದಲ್ಲಿ ಕೊಪ್ಪ ವಲಯದ ದೊಡ್ಡ ಹರವೆ ಕಾರ್ಯಕ್ಷೇತ್ರದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿ ಮೈಸೂರಿನ ನಿಸರ್ಗ ಕಲಾಭಿವೃದ್ಧಿ ಟ್ರಸ್ಟ್ ಸಹಯೋಗದೊಂದಿಗೆ ಚಂದ್ರು ಮತ್ತು ತಂಡದವರಿಂದ ಬೀದಿ ನಾಟಕ ನಡೆಯಿತು. ಈ ವೇಳೆ ಸಂಸ್ಥೆಯ ಜ್ಞಾನ ವಿಕಾಸ ಯೋಜನಾಧಿಕಾರಿ ಆರ್.ರಜನಿ ಅವರು ಮಾತನಾಡಿ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ನಾವೆಲ್ಲರೂ ಆರೋಗ್ಯಕರ ಜೀವನ ನಡೆಸಬಹುದು ಇಲ್ಲವಾದಲ್ಲಿ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ವಹಿಸಬೇಕು ಎಂದರು.
ವಲಯ ಮೇಲ್ವಿಚಾರಕಿ ಪ್ರೇಮ ಅವರು ಮಾತನಾಡಿ ನೀರು ಅತ್ಯಮೂಲ್ಯವಾದ ವಸ್ತು ಅದನ್ನು ದುರುಪಯೋಗಪಡಿಸಿಕೊಳ್ಳದ ಹಾಗೆ ಸದ್ಬಳಕೆ ಮಾಡಿಕೊಂಡಾಗ ಮಾತ್ರ ನೀರಿನ ಮೂಲಗಳು ಹೆಚ್ಚಾಗಿ ನಮಗೆ ಸಿಗುತ್ತವೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ದೊರೆಯುವ ಸುಜ್ಞಾನ ನಿಧಿ, ನಿರಂತರ ಮಾಸಿಕ ಪತ್ರಿಕೆ ಹಾಗು ಸಾಲ ಮರುಪಾವತಿ ಬಗ್ಗೆ ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಈ ಸಂದರ್ಭ ಸೇವಾ ಪ್ರತಿನಿಧಿ ಪದ್ಮ, ಒಕ್ಕೂಟದ ಉಪಾಧ್ಯಕ್ಷೆ ಗೌರಮ್ಮ ಹಾಗು ಸಂಘದ ಸದಸ್ಯರು ಇದ್ದರು.