Friday, April 4, 2025
Google search engine

Homeರಾಜ್ಯಸುದ್ದಿಜಾಲಸಾಲಿಗ್ರಾಮ ತಾಲೂಕಿನ ಚುಂಚನಟ್ಟೆಯಲ್ಲಿ ನಡೆದ ಶ್ರೀರಾಮ ದೇವರ ಬ್ರಹ್ಮರಥೋತ್ಸವ

ಸಾಲಿಗ್ರಾಮ ತಾಲೂಕಿನ ಚುಂಚನಟ್ಟೆಯಲ್ಲಿ ನಡೆದ ಶ್ರೀರಾಮ ದೇವರ ಬ್ರಹ್ಮರಥೋತ್ಸವ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ದಕ್ಷಿಣ ಭಾರತದಲ್ಲಿ ಸುಗ್ಗಿಯ ನಂತರ ನಡೆಯುವ ಇತಿಹಾಸ ಪ್ರಸಿದ್ಧ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಶ್ರೀರಾಮ ದೇವರ ಬ್ರಹ್ಮರಥೋತ್ಸವ ಬುಧವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ ಗಂಟೆಯ 10.50 ಸುಮಾರಿನಲ್ಲಿ ಶ್ರೀರಾಮ ದೇವಾಲಯದಿಂದ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ನಂತರ ಅವುಗಳನ್ನು ಮೆರವಣಿಗೆಯಲ್ಲಿ ತಂದು ವೇದ ಘೋಷಗಳೊಂದಿಗೆ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ಆನಂತರ ಬೆಳಗ್ಗೆ 11.5 ರಿಂದ 12.5 ರಲ್ಲಿ ಸಲ್ಲಿದ ಶುಭ-ಮೀನಾ ಲಗ್ನದಲ್ಲಿ ಆದಿ ಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಶ್ರೀ, ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ, ಕೆ.ಆರ್.ನಗರ ಕಾಗಿನೆಲೆ ಮಠದ ಶಿವನಂದಾಪುರಿ ಸ್ವಾಮಿಜಿ ಸಾನ್ನಿಧ್ಯದಲ್ಲಿ ರಥಕ್ಕೆ ಶಾಸಕ ಡಿ.ರವಿಶಂಕರ್ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ನಂತರ ನೆರೆದಿದ್ದ ಲಕ್ಷಾಂತರ ಮಂದಿ ಶ್ರೀರಾಮನ ಭಕ್ತರು ದೇವರಿಗೆ ಜಯಕಾರ ಕೂಗಿ ರಥವನ್ನು ದೇವಾಲಯದ ಸುತ್ತ ಒಂದು ಸುತ್ತು ಎಳೆದಾಗ ಈ ಅಭೂತಪೂರ್ವ ದೃಶ್ಯವನ್ನು ಕಣ್ಣುಂಬಿ ಕೊಂಡ ಭಕ್ತ ಸಾಗರ ಭಾವ ಪರವಶವಾಯಿತು ಅಲ್ಲದೇ ರಥವನ್ನು ಎಳೆದು ತಂದು ನಿಲ್ಲಿಸಿದಾಗ ಭಕ್ತರು ಜೈ ಶ್ರೀರಾಮ್ ಘೋಷಣೆ ಕೂಗಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ರಥವನ್ನು ಎಳೆಯುವಾಗ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಮತ್ತು ಸ್ಥಳೀಯ ಭಕ್ತಗಣ ದೇವರಿಗೆ ಬಾಳೆಹಣ್ಣು, ಜವನ ಎಸೆದು ತಮ್ಮ ಭಕ್ತಿ ಭಾವ ಸಮರ್ಪಿಪಿಸಿದರಲ್ಲದೇ ನೂತನ ನವ ವಧುವರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಲ್ಲದೇ ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ಸೀತಾ ಸಮೇತ ಶ್ರೀರಾಮ ಮತ್ತು ಲಕ್ಷಣ ದೇವರ ದರ್ಶನ ಪಡೆದು ತಮ್ಮ‌ ಇಷ್ಟಾರ್ಥವನ್ನು ಈಡೇರಿಸುವಂತೆ ಪ್ರಾರ್ಥಿಸಿದರು.

ರಥೋತ್ಸವದ ಕೆಲವರು ದೇವಾಲಯದ ಸಮೀಪ ಅಡುಗೆ ಮಾಡಿ ಭಕ್ತರಿಗೆ ಉಣ ಬಡಿಸಿ ತಮ್ಮ ಹರಕೆ ತೀರಿಸಿದರೇ ಇದರ ಜತೆಗೆ ಬಸವನ ವೃತ್ತದಿಂದ ಶ್ರೀರಾಮ ದೇವಾಲಯದವರೆಗೆ ರಸ್ತೆಯ ಎರಡೂ ಬದಿಯಲ್ಲಿ ಹಾಕಿರುವ ಸಿಹಿತಿಂಡಿ ಮತ್ತು ವಿವಿಧ ಆಟಿಕೆಯ ಅಂಗಡಿಗಳು ಗಮನ ಸೆಳೆದವು.

ರಥೋತ್ಸವದಲ್ಲಿ ಸುನೀತಾರವಿಶಂಕರ್, ಹಿರಿಯ ಕಾಂಗ್ರೇಸ್ ಮುಖಂಡ ದೊಡ್ಡಸ್ವಾಮೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮು,ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ದಮ್ಮನಹಳ್ಳಿ ಉದಯಶಂಕರ್, ಎಂ.ಎಸ್.ಮಹದೇವ್, ಕಾಂಗ್ರೇಸ್ ಮುಖಂಡರಾದ ಡೈರಿಮಾದು, ಸಯದ್ ಸಲಿಂ ,ಚಿಕ್ಕಕೊಪ್ಪಲು ಗಿರೀಶ್, ಸರಿತಾಜವರಪ್ಪ, ಉಷಾಪ್ರಶನ್ನ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ನಟರಾಜು, ನಿರ್ದೇಶಕರಾದ ಸತೀಶ್ ಕರ್ತಾಳ್, ತಹಸೀಲ್ದಾರ್ ನರಗುಂದ, ತಾ.ಪಂ.ಇಓ ಕುಲದೀಪ್,
ಉಪತಹಸೀಲ್ದಾರ್ ಕೆ.ಜೆ.ಶರತ್, ದೇವಾಲಯದ ಇಓ ರಘು, ಪಾರುಪತ್ತೆದಾರ್ ಯತಿರಾಜ್, ಎಇಇ ಗಳಾದ ಅರ್ಕೇಶ್,ಸುಮಿತಾ , ಸೇರಿದಂತೆ ಮತ್ತಿತರರು ಹಾಜರಿದ್ದರು.

ಸಾಲಿಗ್ರಾಮ ತಾಲೂಕಿನ ಚುಂಚನಟ್ಟೆಯಲ್ಲಿ ನಡೆದ ಶ್ರೀರಾಮ ರಥೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಡಿ.ರವಿಶಂಕರ್ ಅವರನ್ನು‌ ಸನ್ಮಾನಿಸಲಾಯಿತು

” ಅನ್ನ ಪ್ರಸಾದ -ಲಾಡು, ಪಾನಕ ವಿತರಣೆ”

ರಥೋತ್ಸವಕ್ಕೆ ಬಂದಿದ್ದವರಿಗೆ ಶಾಸಕ ಡಿ.ರವಿಶಂಕರ್ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಅನ್ನ ಪ್ರಸಾದ ಮತ್ತು ದೇವಾಲಯಕ್ಕೆ ಅಗಮಿಸಿದವರಿಗೆ ಲಾಡು ವಿತರಣೆ ವ್ಯವಸ್ಥೆ ಮಾಡಿದ್ದರು ಭಕ್ತರಿಗೆ ಮಜ್ಜಿಗೆ, ಪಾನಕವನ್ನು ಜಿಲ್ಲಾ ಜೆಡಿಎಸ್ ಮುಖಂಡ ಹಳಿಯೂರು ಮಧುಚಂದ್ರ, ಉದ್ಯಮಿ ಎಚ್.ಕೆ.ಶ್ರೀಧರ್ ವಿತರಣೆ ಮಾಡಿದರು.

ರಥೋತ್ಸವ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬಾರ್ ಬಂದ್ : ಚುಂಚನಕಟ್ಟೆ ಶ್ರೀರಾಮ ರಥೋತ್ಸವದ ಇತಿಹಾಸದಲ್ಲಿಯೇ ಗ್ರಾಮದಲ್ಲಿರುವ ಮತ್ತು ಗ್ರಾಮದ ಪಕ್ಕಪಕ್ಕದಲ್ಲಿ ಇರುವ ಬಾರ್ ಗಳನ್ನು ಇದೇ ಪ್ರಥಮವಾಗಿ ಬಂದ್ ಮಾಡಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶ ದಿಂದ ಚುಂಚನಕಟ್ಟೆ ಗ್ರಾಮದ ಶ್ರೀರಾಮ ಲಿಕ್ಕರ್,ಟಾನಿಕ್ ಅಡ್ಡ,ಹೊಸೂರಿನ ಎಸ್.ಎಲ್.ವಿ, ಮತ್ತು ಪಿ.ಎಸ್. ಜತಗೆ ಮಿರ್ಲೆಯ ಮದುಲೋಕ ಬಾರ್ ಗಳನ್ನು ಮುಚ್ಚಿಸಲಾಗಿತ್ತು.

“ಭಾರೀ ಬಂದೋಬಸ್ತ್”

ಚುಂಚನಕಟ್ಟೆ ಜಾತ್ರೆಗೆ ಬೆಳಗ್ಗೆ ಯಿಂದ ಸಂಜೆಯವರೆಗೆ 1 1 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರಿಂದ ಮೈಸೂರು ಗ್ರಾಮಾಂತರ ಡಿವೈಎಸ್ಪಿ ಅಬ್ದುಲ್ ಕರಿಂ ರಾವತಾರ್ , ಸಾಲಿಗ್ರಾಮ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೃಷ್ಣರಾಜು, ಕೆ.ಆರ್.ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವಪ್ರಕಾಶ್ ನೇತೃತ್ವದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಶ್ರೀರಾಮನ ಈ ಉತ್ಸವ ತಾಲೂಕಿನಲ್ಲಿ ಉತ್ತಮವಾಗಿ ಮಳೆ ಬೆಳೆ ತರಲಿ ಗ್ರಾಮೀಣ ಜನರ ಬದುಕು ಹಸನಾಗಲಿ ದೇವರ ಕೃಪೆ ಇದ್ದರೆ ಎಲ್ಲವೂ ಸಾಧ್ಯವಾಗಲಿದೆ ಜಾತ್ರಾ ಮಹೋತ್ಸವ ಅಚ್ಚುಕಟ್ಟಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುವೆ.

ಡಿ.ರವಿಶಂಕರ್ ಶಾಸಕರು ಕೆ.ಆರ್.ನಗರ


RELATED ARTICLES
- Advertisment -
Google search engine

Most Popular