ಚಾಮರಾಜನಗರ: ಶ್ರೀ ರಾಮನ ಆದರ್ಶಗಳು ಹಾಗೂ ಚಿಂತನೆಗಳು ವಿಶ್ವಕ್ಕೆ ಭಾರತದ ಮಹಾನ್ ಕೊಡುಗೆ ಯಾಗಿದೆ. ಭಾರತದ ಸಂಸ್ಕೃತಿ ಪರಂಪರೆಯ ಆಧಾರ ಸ್ತಂಭವಾಗಿರುವ ಶ್ರೀರಾಮ ಮತ್ತು ಕೃಷ್ಣರ ಸಂದೇಶಗಳು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ಮೂಲಕ ಇದೇ ವಿಶ್ವದ ಮನೆಮನೆಗೆ ಜಾಗೃತಿಯ ಸಂದೇಶವನ್ನು ನೀಡುತ್ತಿರುವುದು ಬಹಳ ಹೆಮ್ಮ ಎಂದು ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರು, ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಋಗ್ವೇದಿ ಕುಟೀರದಲ್ಲಿ ಶ್ರೀರಾಮ ಫಲ ವೃಕ್ಷಕ್ಕೆ ಪೂಜೆ ಮತ್ತು ಶ್ರೀರಾಮ ನಾಮ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕಳೆದ 21 ವರ್ಷಗಳ ಹಿಂದೆ ಋಗ್ವೇದಿ ಕುಟೀರದಲ್ಲಿ ನೆಡಲ್ಪಟ್ಟ ಶ್ರೀರಾಮ ಫಲ ವೃಕ್ಷ ಇಂದು ಮೊಟ್ಟ ಮೊದಲ ಬಾರಿಗೆ ಶ್ರೀರಾಮ ಫಲ ಹಣ್ಣು ಬಿಡುವುದರೊಂದಿಗೆ ಎಲ್ಲರ ಸಂತೋಷವನ್ನು ಹೆಚ್ಚಿಸಿದೆ. ಅಯೋಧ್ಯೆಯಲ್ಲಿ ಸ್ಥಾಪನೆಯಾಗುತ್ತಿರುವ ಹಾಗೂ ಇಡೀ ವಿಶ್ವದಲ್ಲಿ ಶ್ರೀ ರಾಮ ನಾಮ ಜಪ ನಡೆಯುತ್ತಿರುವ ಸಂದರ್ಭದಲ್ಲಿ ಶ್ರೀ ರಾಮ ಫಲ ಬಿಟ್ಟಿರುವುದು ಬಹಳ ಸಂತೋಷ ತಂದಿದೆ.
ರಾಮ ಫಲ,ಸೀತಾಫಲ, ಲಕ್ಷ್ಮಣ ಫಲ, ಹನುಮಾನ್ ಫಲಗಳು ಪ್ರಕೃತಿ ಮತ್ತು ಮಾನವನಿಗಿರುವ ಅವಿನಾಭಾವ ಸಂಬಂಧ ಹಾಗೂ ಆಧ್ಯಾತ್ಮಿಕ ಶಕ್ತಿಯ ಸಂದೇಶವಾಗಿದೆ.

ಶ್ರೀ ರಾಮನ ಆದರ್ಶವೇ ಪ್ರಕೃತಿಯ ಚಿಂತನೆ. ಪ್ರಕೃತಿಯ ರಕ್ಷಣೆ ,ಧರ್ಮ ರಕ್ಷಣೆ, ಸಂಸ್ಕೃತಿಯ ರಕ್ಷಣೆ ಪ್ರತೀ ಜೀವ ರಾಶಿಗೂ ಸನ್ಮಾರ್ಗದಲ್ಲಿ ಹೋಗಲು ದಿವ್ಯ ಸಂದೇಶಗಳನ್ನು ನೀಡಿದ ಶ್ರಿರಾಮರವಿಶೇಷಗಳು ಜಾಗೃತವಾಗಿರಲಿ.
ಶ್ರೀರಾಮ ಪಾರಾಯಣ ,ಭಜನೆ ಪೂಜೆಗಳ ,ಮೂಲಕ ಪ್ರತಿಯೊಬ್ಬರು ಮನಸ್ಸನ್ನು ಸಂತೋಷಗೊಳಿಸಿಕೊಂಡು ಆಯುರಾರೋಗ್ಯ ಐಶ್ವರ್ಯಾದಿಗಳು ಹೆಚ್ಚಲಿ ಎಂದು ಪ್ರಾರ್ಥಿಸುವ ಮೂಲಕ ನಾಡಿಗೆ ಹಾಗೂ ಮನುಷ್ಯ ಕುಲಕ್ಕೆ ಉನ್ನತಿಯನ್ನು ನಾವೆಲ್ಲರೂ ಸಾಧಿಸುವ ದಿಕ್ಕಿನಲ್ಲಿ ನಡೆಯೋಣ ಎಂದು ತಿಳಿಸಿದರು.ಶ್ರೀರಾಮ ಫಲ ವೃಕ್ಷಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು.ಜೈ ಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ,ಬ್ರಾಹ್ಮಿ ಮಹಿಳಾ ಸಂಘದ ವತ್ಸಲಾ ರಾಜಗೋಪಾಲ್ ,ಶಾರದಾ ಭಜನಾ ಮಂಡಳಿಯ ವಿಜಯಲಕ್ಷ್ಮಿ ವಾಣಿಶ್ರೀ, ಸರಸ್ವತಿ ಚಂದ್ರಕಲ, ಶಂಕರ ಪುರ ಹಿತರಕ್ಷಣ ಸಮಿತಿಯ ಮುರುಗೇಶ್, ಝಾನ್ಸಿ ಮಕ್ಕಳ ಪರಿಷತ್ತಿನ ಶ್ರಾವ್ಯ ಋಗ್ವೇದಿ ಇತರರು ಇದ್ದರು.