ನಂಜನಗೂಡು: ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ಶ್ರೀ ಶ್ರೀಕಂಠೇಶ್ವರ ದೇವಾಲಯ ತನ್ನದೇ ಆದ ಇತಿಹಾಸ ಹೊಂದಿದೆ. ದೇವಲಾಯದ ಆದಾಯ ಕೋಟಿ ರೂ. ಮೀರಿದೆ.
ದೇವಾಲಯಕ್ಕೆ ಹುಣ್ಣಿಮೆ ದಿನ ಭಾನುವಾರ ಸೋಮವಾರ ರಜಾ ದಿನಗಳಲ್ಲಿ ಹೆಚ್ಚಿನ ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಮಹಿಳಾ ಭಕ್ತಾದಿಗಳಿಗೆ ಶೌಚಾಲಯ ಸೌಕರ್ಯ ವಿಲ್ಲದಿರುವುದರಿಂದ ಮಹಿಳೆಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ದೇವಸ್ಥಾನದ ವತಿಯಿಂದ ನಿರ್ಮಿಸಿರುವ ಹೊಸ ಶೌಚಾಲಯವು ಕಳೆದ ಮೂರು ವರ್ಷಗಳಿಂದ ಉಪಯೋಗಕ್ಕೂ ಬಾರದೆ ಇರುವುದರಿಂದ ಬೀಗ ಜಡಿಯಲಾಗಿದ್ದು, ಕುಡುಕರ ತಾಣವಾಗಿದೆ.

ಇದಲ್ಲದೆ ಹಳೆಯ ಶೌಚಾಲಯಗಳು ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿವೆ. ನೂತನವಾಗಿ ಕಟ್ಟಿರುವ ಶೌಚಾಲಯ ಬಳಕೆ ಮಾಡಿದರೆ ಹಳೆ ಶೌಚಾಲಯ ಗುತ್ತಿಗೆದಾರನಿಗೆ ತೊಂದರೆ ಆಗುತ್ತದೆ ಎಂದು ಹೊಸ ಶೌಚಾಲಯ ಉಪಯೋಗ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಭಕ್ತಾದಿಗಳು ಅಧಿಕಾರಿಗಳ ಮೇಲೆ ಕಿಡಿಕಾರಿದ್ದಾರೆ.
ಭಕ್ತಾದಿಗಳು ದೇವಸ್ಥಾನದ ಹೊರ ಆವರಣವನ್ನು ಶೌಚಾಲಯಕ್ಕೆ ಉಪಯೋಗಿಸುವ ಪರಿಸ್ಥಿತಿ ಉಂಟಾಗಿದೆ. ದೇವಸ್ಥಾನಕ್ಕೆ ಕುಟುಂಬ ಸಮೇತ ಬರುವುದರಿಂದ ಮಕ್ಕಳಿಗೂ ಕೂಡ ಬಹಳ ತೊಂದರೆಯಾಗಿದೆ. ಪುರುಷರು ಕಪಿಲ ನದಿಯನ್ನು ಶೌಚಾಲಯ ಮಾಡಿಕೊಂಡು ಉಪಯೋಗ ಮಾಡುತ್ತಿದ್ದಾರೆ. ಇದರಿಂದ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಕಪಿಲಾ ನದಿಯಲ್ಲಿ ಸ್ನಾನ ಮಾಡಲು ಬಹಳ ಮುಜುಗರ ಉಂಟಾಗಿದೆ.
ಸ್ಥಳೀಯ ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರು, ದೇವಾಲಯ ಅಧಿಕಾರಿಗಳ ಸಭೆ ನಡೆಸಿ ದೇವಾಲಯದ ಮೂಲಭೂತ ಸೌಕರ್ಯ ಕೊರತೆ ಉಂಟಾಗಿರುವುದನ್ನು ಸರಿಪಡಿಸಿಕೊಡಬೇಕೆಂದು ಭಕ್ತಾದಿಗಳು ಮನವಿ ಮಾಡಿದ್ದಾರೆ.