ಮೈಸೂರು : ಇಲ್ಲಿನ ಜಯನಗರ ಬಡಾವಣೆಯಲ್ಲಿರುವ ಮೈಸೂರು ಇಸ್ಕಾನ್ ಕೇಂದ್ರದಲ್ಲಿ ಡಿ.೨೩ ರಂದು ಶ್ರೀ ವೈಕುಂಠ ಏಕಾದಶಿಯನ್ನು ಏರ್ಪಡಿಸಲಾಗಿದೆ ಎಂದು ಮೈಸೂರು ಇಸ್ಕಾನ್ ಪ್ರಧಾನ ವ್ಯವಸ್ಥಾಪಕರಾದ ಪಂಕಜಾಂಘ್ರಿ ದಾಸ ತಿಳಿಸಿದರು.
ನಾಳೆ ಡಿ.೨೩ ರಂದು ಶನಿವಾರ ನಡೆಯಲಿರುವ ಶ್ರೀ ವೈಕುಂಠ ಏಕಾದಶಿಯಂದು ದೇವಸ್ಥಾನದಲ್ಲಿ ವಿಶಿಷ್ಟವಾದ ವೈಕುಂಠ ದ್ವಾರವನ್ನು ನಿರ್ಮಿಸಲಾಗುವುದು. ಬೆಳಗ್ಗೆ ೭.೩೦ ರಿಂದ ರಾತ್ರಿ ೧೦ ಗಂಟೆ ತನಕ ಭಕ್ತರಿಗೆ ವೈಕುಂಠ ದ್ವಾರ ದರ್ಶನ ಏರ್ಪಡಿಸಲಾಗಿದೆ. ಬೆಳಿಗ್ಗೆ ೯ ರಿಂದ ರಾತ್ರಿ ೧೦ ರವರೆಗೆ ಹಲವಾರು ಗಾಯನ ಮತ್ತು ವಾದ್ಯ ಕಲಾವಿದರು ಭಗವಂತನ ಸಂತೋಷಕ್ಕಾಗಿ ತಮ್ಮ ಪ್ರದರ್ಶನಗಳೊಂದಿಗೆ ಉತ್ಸವವನ್ನು ಆಚರಿಸುವರು ಎಂದರು.
ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಹೇಳಿದ ದಿನವಾದ ಗೀತಾ ಜಯಂತಿಯೊಂದಿಗೆ ಈ ಮಂಗಳಕರ ದಿನವೂ ಸೇರಿಕೊಳ್ಳುತ್ತದೆ. ಅವರ ನೆನಪಿಗಾಗಿ ಮಧ್ಯಾಹ್ನ ೨ ರಿಂದ ಸಂಜೆ ೫ ರವರೆಗೆ ಭಗವದ್ಗೀತೆಯ
ಸಂಪೂರ್ಣ ೭೦೦ ಶ್ಲೋಕಗಳ ಪಠಣ ನಡೆಯಲಿದೆ.
ವೈಕುಂಠ ಏಕಾದಾಶಿ ದಿನದಂದು ಯಾರೇ ಆಗಲಿ, ಶ್ರದ್ಧೆ ಮತ್ತು ಭಕ್ತಿಯಿಂದ ವೈಕುಂಠ ದ್ವಾರದ ಮೂಲಕ ಪ್ರವೇಶ ಮಾಡಿದ್ದಲ್ಲಿ ಅವರಿಗೆ ವೈಕುಂಠ ಲೋಕ ಪ್ರಾಪ್ತಿಯಾಗುತ್ತದೆಂದು ಪದ್ಮ ಪುರಾಣದಲ್ಲಿ ತಿಳಿಸಲಾಗಿದೆ ಎಂದರು.