ಚಾಮರಾಜನಗರ: ಭಾರತೀಯ ಧರ್ಮ ,ಸಂಸ್ಕೃತಿ ,ಆಧ್ಯಾತ್ಮ ಶಕ್ತಿಯನ್ನು ಜಗತ್ತಿಗೆ 1300 ವರ್ಷಗಳಿಂದ ನಿರಂತರವಾಗಿ ಗುರು ಪರಂಪರೆಯ ಮೂಲಕ ಮಾನವ ಕಲ್ಯಾಣವನ್ನುಂಟು ಮಾಡುತ್ತಿರುವ ಶೃಂಗೇರಿ ಪರಂಪರೆಯ ಕಾರ್ಯ ಮಹೋನ್ನತವಾದದ್ದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ರಾಜ್ಯ ಉಪಾಧ್ಯಕ್ಷರು ,ಶ್ರೀ ಶಂಕರ ಅಭಿಯಾನದ ಪ್ರಧಾನರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಋಗ್ವೇದಿ ಕುಟೀರದಲ್ಲಿ ಶ್ರೀ ಶಂಕರ ಅಭಿಯಾನ, ಋಗ್ವೇದಿ ಯೂತ್ ಕ್ಲಬ್, ಶಾರದಾ ಭಜನಾ ಮಂಡಳಿ ಹಮ್ಮಿಕೊಂಡಿದ್ದ ಶೃಂಗೇರಿ ಜಗದ್ಗುರು ಶ್ರೀ ವಿಧು ಶೇಖರ ಭಾರತಿ ಸ್ವಾಮಿಗಳವರ ವರ್ಧಂತಿ ಕಾರ್ಯಕ್ರಮದಲ್ಲಿ ಶ್ರೀ ಶೃಂಗೇರಿ ಗುರುಪರಂಪರೆ ಕುರಿತು ಉಪನ್ಯಾಸ ನೀಡುತ್ತಾ ಜಗದ್ಗುರು ಶ್ರೀ ಶ್ರೀ ಶಂಕರಾಚಾರ್ಯರು ಇಡೀ ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸುವ ಮೂಲಕ ಭಾರತೀಯ ನಾಲ್ಕು ವೇದಗಳ ಸಂರಕ್ಷಣೆ ,ಉಪನಿಷತ್ತು ಮಹಾಕಾವ್ಯಗಳು ,ವೈದಿಕ ಸಾಹಿತ್ಯದ ಅರ್ಥವನ್ನು ಜಗತ್ತಿಗೆ ನೀಡಿ ಭಾರತೀಯ ಸಾಹಿತ್ಯದ ಮೂಲಕ ಮಾನವನ ಜ್ಞಾನ ಶಕ್ತಿಯನ್ನು ಪ್ರಸರಿಸುವ ಶ್ರೇಷ್ಠ ಕಾರ್ಯವನ್ನು ಆದಿಶಂಕರರು ಮಾಡಿದ್ದಾರೆ. ಒಂದು ಸಾವಿರದ ಮುನ್ನೂರು ವರ್ಷಗಳ ಹಿಂದೆ ಶ್ರೀ ಶೃಂಗೇರಿಯಲ್ಲಿ ಸ್ಥಾಪಿತವಾದ ಶ್ರೀ ಶಾರದಾ ಪೀಠದ ಮುಖ್ಯಸ್ಥರಾಗಿ ಜಗದ್ಗುರುಗಳಾಗಿ ಶ್ರೀ ಸುರೇಶ್ವರಾಚಾರ್ಯರಿಂದ ಆರಂಭಗೊಂಡ ಶೃಂಗೇರಿ ಶಾರದಾ ಪೀಠವು ನಿರಂತರವಾಗಿ ಅವಿಚ್ಛಿನ್ನವಾಗಿ ಶ್ರೇಷ್ಠ ಗುರುಪರಂಪರೆಯ ಮೂಲಕ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಭಾರತೀಯ ಸನಾತನ ಧರ್ಮ ಉಳಿವು ಮತ್ತು ಅದರ ಶಕ್ತಿ ಸಾರವನ್ನು ಪ್ರತಿಯೊಬ್ಬ ಮನುಷ್ಯನಿಗೂ ಅರ್ಥ ಮಾಡಿಸುವ ಮೂಲಕ ಸದಾ ಸುಖವಾಗಿ ಆಧ್ಯಾತ್ಮಿಕತೆಯ ಮೂಲಕ ಮನಸ್ಸನ್ನು ಸಂತೋಷವಾಗಿ ಇಟ್ಟುಕೊಂಡು ಸಮಾಜದ ಕಾರ್ಯವನ್ನು ಮಾಡಲು ಗುರು ಪರಂಪರೆ ಆಶೀರ್ವಾದ ನೀಡುತ್ತಾ ಬಂದಿದೆ.
ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಶ್ರೀ ವಿದು ಶೇಖರ ಸ್ವಾಮಿರವರು ಭಾರತದಲ್ಲಿ ವಿಜಯಾತ್ರೆಯ ಮೂಲಕ ಇಡೀ ಭಾರತವನ್ನು ಪ್ರವಾಸ ಮಾಡಿ ಧರ್ಮ ಜಾಗೃತಿಯನ್ನು ಉಂಟು ಮಾಡಿದ್ದಾರೆ .ಅವರ 33ನೇ ವರ್ಧಂತಿ ಸಂದರ್ಭದಲ್ಲಿ ಶ್ರೀ ಶಂಕರರ ತತ್ವಗಳು ವಿಚಾರಧಾರೆಗಳು ಎಲ್ಲಡೆ ಪ್ರಸರಿಸುವ ಕಾರ್ಯವನ್ನು ನಿರಂತರವಾಗಿ ನೆರವೇರಿಸಿಕೊಂಡು ಬರುತ್ತಿದೆ. ನೂರಾರು ಸ್ತೋತ್ರಗಳನ್ನು ಪ್ರತಿಯೊಬ್ಬ ವ್ಯಕ್ತಿಯೂ ಧ್ಯಾನ, ಭಕ್ತಿ ,ಕರ್ಮದ ವಿಚಾರವನ್ನು ಅರ್ಥ ಮಾಡಿಕೊಂಡಿದ್ದಾನೆ. ಶೃಂಗೇರಿಯ ಶಂಕರ ಅಭಿಯಾನವು ಅಪಾರ ಧರ್ಮ ಜಾಗೃತಿ ಕಾರ್ಯವನ್ನು ಹಮ್ಮಿಕೊಂಡು ಬರುತ್ತಿದೆ ಎಂದು ಋಗ್ವೇದಿ ತಿಳಿಸಿದರು.
ಶ್ರೀ ಶಂಕರಾಚಾರ್ಯರು ಹಾಗೂ ವಿಧೂ ಶೇಖರ ಭಾರತಿ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದ ಶ್ರೀ ಶಾರದಾ ಅಭಿಯಾನದ ವತ್ಸಲಾ ರಾಜಗೋಪಾಲ್ ಗುರು ಸ್ಮರಣೆ ಆನಂದವನ್ನು ಉಂಟುಮಾಡುತ್ತದೆ. ಗುರುವಿಲ್ಲದ ಜೀವನ ವ್ಯರ್ಥ. ಪ್ರತಿಯೊಬ್ಬ ವ್ಯಕ್ತಿಯು ಗುರು ಪರಂಪರೆಯಲ್ಲಿ ಮಾರ್ಗದರ್ಶನ ಪಡೆದು ಸೇವೆಯನ್ನು ಸಲ್ಲಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರವಿ, ಶಾರದಾ ಭಜನಾ ಮಂಡಳಿಯ ಮಾಲಾ, ಕುಸುಮ ಋಗ್ವೇದಿ , ಯೂತ್ ಕ್ಲಬ್ ಅಧ್ಯಕ್ಷೆ ಶರಣ್ಯ, ವಿಜಯಲಕ್ಷ್ಮಿ, ಸರಸ್ವತಿ ವಾಣಿಶ್ರೀ ,ಪೂರ್ಣಿಮಾ ಉಪಸ್ಥಿತರಿದ್ದರು.