ಮೈಸೂರು: ಮಾಜಿ ಸಚಿವರಾಗಿದ್ದ ದಿ. ವಿ. ಶ್ರೀನಿವಾಸ್ ಪ್ರಸಾದ್‌ರವರು ಬುದ್ಧ, ಬಸವಣ್ಣ, ಅಂಬೇಡ್ಕರ್‌ರವರ ತತ್ವಸಿದ್ಧಾಂತಗಳನ್ನು ಅಳವಡಿಸಿಕೊಂಡು ಸ್ವಾಭಿಮಾನಿ ರಾಜಕಾರಣಿಯಾಗಿದ್ದರು ಎಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ನಾಡನಹಳ್ಳಿ ಬಳಿ ಇರುವ ಶ್ರೀ ಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ದಿವಂಗತ ವಿ. ಶ್ರೀನಿವಾಸ್ ಪ್ರಸಾದ್‌ರವರು ನುಡಿನಮನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ರೀನಿವಾಸ್ ಪ್ರಸಾದ್‌ರವರು ದಲಿತ ಹಿಂದುಳಿದ ವರ್ಗದ ದೊಡ್ಡಶಕ್ತಿಯಾಗಿದ್ದರು. ದಲಿತರು ಹಿಂದುಳಿದವರು ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಾ ಸ್ವಾಭಿಮಾನದಿಂದ ಬದುಕಬೇಕು ಎಂದು ಹೇಳುತ್ತಿದ್ದರು. ಸಿದ್ದರಾಮಯ್ಯರವರು ಮತ್ತು ಶ್ರೀನಿವಾಸ್‌ಪ್ರಸಾದರವರಿಗೆ ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಸಹ ಒಳ್ಳೆಯ ಸ್ನೇಹಿತರಾಗಿದ್ದರು. ಸಿದ್ದರಾಮಯ್ಯರವರಿಗೆ ಶ್ರೀನಿವಾಸ್ ಪ್ರಸಾದ್‌ರ ಬಗ್ಗೆ ಅಪಾರ ಗೌರವವಿದೆ. ಶ್ರೀನಿವಾಸ್ ಪ್ರಸಾದ್‌ರವರು ೫೦ ವರ್ಷದ ರಾಜಕಾರಣದಲ್ಲಿ ಅಜಾತಶತ್ರುವಾಗಿದ್ದರು. ಅವರ ಬಗ್ಗೆ ಪಕ್ಷಾತೀತವಾಗಿ ಎಲ್ಲಾ ರಾಜಕಾರಣಿಗಳು ಅಪಾರ ಗೌರವ ಇಟ್ಟುಕೊಂಡಿದ್ದರು.
ಜನರ ಮಧ್ಯೆ ಇದ್ದು, ಜನರ ಪ್ರೀತಿಗೆ ಪಾತ್ರರಾಗಿ ಅಪಾರ ಜನಮನ್ನಣೆ ಗಳಿಸಿದ ಅಪರೂಪ ರಾಜಕಾರಣಿಯಾಗಿದ್ದರು. ಶ್ರೀನಿವಾಸ್ ಪ್ರಸಾದ್‌ರವರ ಜೀವನ ಆದರ್ಶ ಎಲ್ಲಾ ಪಕ್ಷದ ಯುವ ರಾಜಕಾರಣಿಗಳಿಗೆ ಸ್ಪೂರ್ತಿಯಾಗಬೇಕು. ಅವರ ನೆನಪು ಶಾಶ್ವತವಾಗಿ ಉಳಿಯುವಂತಹ ಕೆಲಸವನ್ನು ಸರ್ಕಾರ ಮಾಡಬೇಕು ಎಂದರು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ. ವಿಜಯ್‌ಕುಮಾರ್, ಬಂತೇಜಿ ಸ್ವಾಮೀಜಿ, ಜ್ಞಾನಪ್ರಕಾಶ ಸ್ವಾಮೀಜಿ, ಮಲ್ಕುಂಡಿ ಮಹದೇವಸ್ವಾಮಿ ಮಾತನಾಡಿದರು. ಮುಖಂಡರಾದ ಮಣಿಯಯ್ಯ, ರಂಗಸ್ವಾಮಿ, ರಮೇಶ ಮುದ್ದೇಗೌಡ, ಹೆಳವರಹುಂಡಿ ಸೋಮು, ಎಂ.ಟಿ. ರವಿಕುಮಾರ್, ಮಂಜುಳಾ ಮಂಜುನಾಥ್, ಮಹದೇವ್, ಜವರಪ್ಪ, ಸಕ್ಕಳ್ಳಿ ಬಸವರಾಜು, ಕನಕಮೂರ್ತಿ, ಹುಣಸೂರು ಬಸವಣ್ಣ, ಆಪ್ತ ಸಹಾಯಕ ಶಿವಸ್ವಾಮಿ, ನಾಗರಾಜ್ ಹಾಜರಿದ್ದರು.