ಮೈಸೂರು: ಶ್ರೀನಿವಾಸ್ ಪ್ರಸಾದ್ ಒಬ್ಬ ಸ್ವಾಭಿಮಾನಿ ಸಜ್ಜನ ರಾಜಕಾರಣಿ. ಸಾಮಾಜಿಕ ನ್ಯಾಯದ ಬಗ್ಗೆ ಅಪಾರವಾದ ನಂಬಿಕೆ ಇಟ್ಟುಕೊಂಡಿದ್ದರು ಎಂದು ಸಿಎಂ ಸಿದ್ದರಾಮಯ್ಯ ಗುಣಗಾನ ಮಾಡಿದರು.
ದಿ. ವಿ. ಶ್ರೀನಿವಾಸ್ ಪ್ರಸಾದ್ ಶ್ರದ್ಧಾಂಜಲಿ ಸಭೆಯಲ್ಲಿ ಇಂದ ಶನಿವಾಋ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಶ್ರೀನಿವಾಸ್ ಪ್ರಸಾದ್ ವಯಸ್ಸಿನಲ್ಲಿ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು. ಆದರೆ ನನಗಿಂತ ಮೊದಲೇ ರಾಜಕಾರಣ ಪ್ರವೇಶ ಮಾಡಿದ್ದರು. ನಾನು ಅವರು ಒಟ್ಟಿಗೆ ಜನತಾ ಪಾರ್ಟಿಯಲ್ಲಿದ್ದೆವು, ೧೯೭೭ ರಲ್ಲಿ ಅವರು ಲೋಕಸಭೆ ಸ್ಪರ್ಧೆ ಮಾಡಿದ್ದರು. ೧೯೭೮ ರಲ್ಲಿ ವಿಧಾನಸಭಾಗೆ ಸ್ಪರ್ಧೆ ಮಾಡಿದ್ದರು. ಆಗ ಅವರಿಗೆ ಪರಜಯವಾಯಿತು. ಮೊದಲಿಂದಲೂ ಅವರು ಕಾಂಗ್ರೆಸ್ ಗೆ ವಿರುದ್ಧವಾಗಿದ್ದರು. ೧೯೮೦ ರಲ್ಲಿ ಪಾರ್ಲಿಮೆಂಟ್ ಚುನಾವಣೆ ವೇಳೆ ಕಾಂಗ್ರೆಸ್ ಸೇರಿದರು. ಬೇರೆ ಬೇರೆ ಪಕ್ಷದಲ್ಲಿದ್ದರೂ ಕೂಡ ಪರಸ್ಪರ ಸ್ನೇಹ ಬಾಂಧವ್ಯ, ಒಡನಾಟ ಚೆನ್ನಾಗಿತ್ತು ಎಂದು ಹೇಳಿದರು.
ಇತ್ತೀಚೆಗೆ ನಾನು ಅವರನ್ನ ಭೇಟಿ ಮಾಡಿ ಬಂದಿದ್ದೆ. ನನ್ನ ಅವರ ಭೇಟಿ ರಾಜಕೀಯ ಭೇಟಿ ಆಗಿರಲಿಲ್ಲ, ಸುಮಾರು ಅರ್ಧ ಗಂಟೆ ಕೂತು ಮಾತನಾಡಿದ್ದೆ. ಆಗ ಮೊದಲಿನಂತೆ ಆತ್ಮೀಯವಾಗಿ ಬರಮಾಡಿಕೊಂಡು ಆತ್ಮೀಯವಾಗಿ ಮಾತನಾಡಿದರು. ಕೊನೇ ಕೊನೆಯಲ್ಲಿ ರಾಜಕೀಯದಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಬಂದಂತೆ ಮಾತಾಡುತ್ತಿದ್ದರು. ಧಕ್ಕೆಯಾದಾಗ ಮಾತ್ರ ಅವರು ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಬಡವರು, ದಲಿತರು, ಹಿಂದುಳಿದವರಿಗೆ ಯಾವಾಗಲೂ ಸ್ವಾಭಿಮಾನ ಅನ್ನುವುದು ಇರಲೇ ಬೇಕು. ಇಲ್ಲ ಅಂದ್ರೆ ಗುಲಾಮಗಿರಿ ಅನುಭವಿಸಬೇಕಾಗುತ್ತದೆ. ತಮ್ಮ ಬದುಕಿನುದ್ದಕ್ಕೂ ಅಸಮಾನತೆ, ಅನ್ಯಾಯಗಳ ವಿರುದ್ಧ ಹೋರಾಟ ಮಾಡಿದ ವ್ಯಕ್ತಿ ಶ್ರೀನಿವಾಸ್ ಪ್ರಸಾದ್. ಹಳೆ ತಲೆಮಾರಿನ ರಾಜಕಾರಣಿಗಳ ಕೊಂಡಿ ಕಳಚಿದೆ. ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಇರಬಹುದು ಆದರೆ ಸ್ನೇಹಕ್ಕೆ ಧಕ್ಕೆ ಆಗಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮೆಲುಕು ಹಾಕಿದರು.