Friday, April 11, 2025
Google search engine

Homeರಾಜಕೀಯಶ್ರೀರಾಮುಲುಗೆ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿಲ್ಲ: ಡಿಸಿಎಂ ಡಿಕೆ ಶಿವಕುಮಾರ್

ಶ್ರೀರಾಮುಲುಗೆ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿಲ್ಲ: ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ನನಗೆ ಶ್ರೀರಾಮುಲು ಅವರು ಸಿಕ್ಕಿಲ್ಲ. ನನ್ನ ಬಳಿ ಅವರು ಮಾತನಾಡಿಲ್ಲ. ಪಕ್ಷಕ್ಕೆ ಬರುವಂತೆ ಅವರಿಗೆ ಯಾವುದೇ ಆಹ್ವಾನ ನೀಡಿಲ್ಲ. ಈ ವಿಚಾರದಲ್ಲಿ ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿ ರಾಮುಲು ಅವರನ್ನು ನೀವು ಸಂಪರ್ಕ ಮಾಡಿದ್ದೀರಿ ಎನ್ನುವ ಜನಾರ್ಧನ ರೆಡ್ಡಿ ಅವರ ಆರೋಪದ ಬಗ್ಗೆ ಕೇಳಿದಾಗ, ಆತ ಬಾಯಿ ಚಪಲಕ್ಕೆ ಮಾತನಾಡುತ್ತಿದ್ದಾನೆ. ಆತ ಆ ಪಕ್ಷದಲ್ಲಿಯೇ ಇರಲಿಲ್ಲ. ಈಗ ಆ ಪಕ್ಷಕ್ಕೆ ಕಾಲಿಟ್ಟ, ಆ ಮನೆಯನ್ನೇ ಒಡೆಯುವ ಪ್ರಯತ್ನ ಮಾಡುತ್ತಿದ್ದಾನೆ ಎಂದು ಕಿಡಿಕಾರಿದರು.

ನಾನು ಆತನ ಹೆಸರು ಹೇಳಿ ಅವನನ್ನು ಏಕೆ ದೊಡ್ಡ ಮನುಷ್ಯನನ್ನಾಗಿ ಮಾಡಲಿ? ಆತ ನನ್ನ ಹೆಸರು ತೆಗೆದುಕೊಂಡರೆ ದೊಡ್ಡವನಾಗುತ್ತಾನೆಯೇ? ನಾನು ಸಂಪರ್ಕದಲ್ಲಿ ಇರುವುದನ್ನು ಆತ ನೋಡಿದ್ದಾನೆಯೇ? ಆತನೇ ಯಾರ ಜೊತೆ ಸಂಪರ್ಕದಲ್ಲಿ ಇದ್ದ ಎಂಬುದನ್ನು ಈಗ ಚರ್ಚೆ ಮಾಡುವುದು ಬೇಡ. ನಾನು ಯಾವುದನ್ನು ಬಹಿರಂಗಗೊಳಿಸಲು ಹೋಗುವುದಿಲ್ಲ ಎಂದರು.

ಈ ಹಿಂದೆ ಚುನಾವಣೆಗೆ ಮುಂಚಿತವಾಗಿ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದು ನಿಜ. ಆಗ ಅವರು ಬರುವುದಿಲ್ಲ, ಬಿಜೆಪಿಯಲ್ಲಿಯೇ ಉಳಿದುಕೊಳ್ಳುತ್ತೇನೆ ಎಂದು ಹೇಳಿದ್ದರು. ನಾನು ಆ ರೀತಿ ಸುಮಾರು 50 ಜನಕ್ಕೆ ಕೇಳಿದ್ದೇನೆ. ಶ್ರೀರಾಮುಲು ಅವರು ಈಗ ಕಾಂಗ್ರೆಸ್ ಪಕ್ಷಕ್ಕೆ ಬರಲು ಒಪ್ಪಿದರೆ ಎಂದು ಪ್ರಶ್ನಿಸಿದಾಗ, ಇದರ ಬಗ್ಗೆ ನಾನೇಕೆ ಸುಮ್ಮನೆ ಯೋಚನೆ ಮಾಡಲಿ ಎಂದು ಹೇಳಿದರು.

ಮೈಕ್ರೋ ಫೈನಾನ್ಸ್ ಹಾವಳಿಗಳ ಬಗ್ಗೆ ಕೇಳಿದಾಗ, “ಈ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು, ಕಂದಾಯ, ಗೃಹ, ಕಾನೂನು ಸಚಿವರು ಸೇರಿ ಚರ್ಚೆ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ನಾನು ಹಿಂದೆ ಅಧ್ಯಯನ ಮಾಡಿದ್ದೆ. ಕಾನೂನಾತ್ಮಕವಾಗಿ ಯಾವ ಕ್ರಮ ತೆಗೆದುಕೊಳ್ಳಬಹುದು ಎಂದು ನಾವು ಚರ್ಚೆ ಮಾಡುತ್ತೇವೆ. ಸದ್ಯದಲ್ಲಿಯೇ ಸರ್ಕಾರದ ನಿರ್ಧಾರ ತಿಳಿಸಲಾಗುವುದು. ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ” ಎಂದು ಹೇಳಿದರು.

2026 ಕ್ಕೆ ಫ್ರಾನ್ಸ್ ದೇಶದ ವೀಸಾ ಬೆಂಗಳೂರಿನಲ್ಲಿ ಲಭ್ಯ

ಫ್ರಾನ್ಸ್ ದೇಶದ ಕಾನ್ಸುಲೇಟ್ ಕಚೇರಿಯ ಅಧಿಕಾರಿಗಳು ನನ್ನ ಭೇಟಿ ಮಾಡಿ ಸಂತಸ ವ್ಯಕ್ತಪಡಿಸಿದರು. ಕರ್ನಾಟಕದಿಂದ ಉತ್ತಮ ಹೂಡಿಕೆದಾರರು ಬರುತ್ತಿದ್ದಾರೆ. ನಮ್ಮ ಹೂಡಿಕೆದಾರರು ಸಹ ಸಂತಸಗೊಂಡಿದ್ದಾರೆ. 2026 ರ ವೇಳೆಗೆ ಬೆಂಗಳೂರಿನಲ್ಲಿ ಫ್ರಾನ್ಸ್ ದೇಶಕ್ಕೆ ವೀಸಾ ನೀಡುವ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರದಿಂದಲೂ ಸಹಕಾರ ನೀಡುವುದಾಗಿ ತಿಳಿಸಿದ್ದೇವೆ. ಯಾವುದೇ ವಿಚಾರಕ್ಕೂ ಹಿಂಜರಿಕೆ ಮಾಡಿಕೊಳ್ಳಬೇಡಿ. ಕರ್ನಾಟಕದಲ್ಲಿ ಪ್ರಗತಿಪರವಾದ ಸರ್ಕಾರವಿದೆ. ನಿಮ್ಮ ಜೊತೆ ನಿಲ್ಲುತ್ತದೆ ಎಂದು ತಿಳಿಸಿದ್ದೇವೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular