ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕು ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಶೇ.81.39 ಪಡೆಯುವ ಮೂಲಕ ಜಿಲ್ಲೆಯಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ.
ಸತತ 9 ವರ್ಷಗಳಿಂದ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದ್ದ ಪಿರಿಯಾಪಟ್ಟಣ ತಾಲ್ಲೂಕು ಈ ಬಾರಿ ದಾಖಲೆಯ ಕುಸಿತ ಕಾಣುವ ಮೂಲಕ ಶೈಕ್ಷಣಿಕವಾಗಿ ಹಿನ್ನಡೆ ಕಂಡಿದೆ, ಒಟ್ಟು 2999 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 2441 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, 1121 ಗಂಡು ಹಾಗು 1320 ಹೆಣ್ಣು ಮಕ್ಕಳು ಉತ್ತೀರ್ಣರಾಗುವ ಮೂಲಕ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ, ತಾಲೂಕಿನ ಒಟ್ಟು 7 ಶಾಲೆಗಳು ಶೇ.100 ಫಲಿತಾಂಶ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿವೆ, ಸರ್ಕಾರಿ ಶಾಲೆಗಳಲ್ಲಿ ಮುರಾರ್ಜಿ ವಸತಿ ಶಾಲೆ ಹಲಗನಹಳ್ಳಿ ಮತ್ತು ಇಂದಿರಾಗಾಂಧಿ ವಸತಿ ಶಾಲೆ ಪಿರಿಯಾಪಟ್ಟಣ, ಅನುದಾನಿತ ಶಾಲೆಗಳಲ್ಲಿ ಹೊನ್ನಾಪುರದ ಜೆಕೆಟಿ ವಿದ್ಯಾಸಂಸ್ಥೆ ಹಾಗೂ ಖಾಸಗಿ ಶಾಲೆಗಳಲ್ಲಿ ಬೆಟ್ಟದಪುರದ ಡಿಟಿಎಂಎನ್ ಮತ್ತು ಚಾಣಕ್ಯ, ಮರಡಿಯೂರಿನ ಆಕ್ಸಿಲಿಯಂ, ಚೌಡೇನಹಳ್ಳಿಯ ಶ್ರೀ ವೇದಾಕ್ಷಿ ಗಣೇಶ್ ವಿದ್ಯಾಸಂಸ್ಥೆ ಶೇ.100 ಫಲಿತಾಂಶ ಪಡೆದಿವೆ.
ಬೆಟ್ಟದಪುರ ಡಿಟಿಎಂಎನ್ ವಿದ್ಯಾಸಂಸ್ಥೆಯ ಗುಣಶ್ರೀ (608) ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದ್ದು ಭಾರತ್ ಮಾತಾ ಕೊಪ್ಪ ವಿದ್ಯಾ ಸಂಸ್ಥೆಯ ಸಾಧನಸ್ವಾಮಿ(596) ಮತ್ತು ಪಿರಿಯಾಪಟ್ಟಣದ ಪುಷ್ಪ ವಿದ್ಯಾಸಂಸ್ಥೆಯ ಪ್ರೇಕ್ಷ (596) ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ, ಅತ್ತಿಗೋಡು ಸರ್ಕಾರಿ ಪ್ರೌಢಶಾಲೆಯ ನಿರ್ಸಲ(595) ತೃತೀಯ ಸ್ಥಾನ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಬಿಇಒ ಬಸವರಾಜು ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಬೋಧಕೇತರ ಸಿಬ್ಬಂದಿ ಹಾಗೂ ಶಿಕ್ಷಣಾಸಕ್ತರು ಅಭಿನಂದಿಸಿದ್ದಾರೆ. ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಡಿಟಿಎಂಎನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಗುಣಶ್ರೀ ಅವರನ್ನು ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ್ ಆಡಳಿತ ಅಧಿಕಾರಿ ನಟರಾಜ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಮುರಳಿ ಕೃಷ್ಣ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಅಭಿನಂದಿಸಿದರು.