ಬೆಂಗಳೂರು: ಲಕ್ಷಾಂತರ ವಿದ್ಯಾರ್ಥಿಗಳ ಹಾಗೂ ಪೋಷಕರ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವು ಇಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಪ್ರಕಟಗೊಳ್ಳಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸುವ ಮೂಲಕ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದಾರೆ.
625 ಅಂಕಗಳಿಗೆ ಫಲಿತಾಂಶ ಪ್ರಕಟ
ಈ ಬಾರಿಯ ಫಲಿತಾಂಶದಲ್ಲಿ ಒಂದು ಪ್ರಮುಖ ಬದಲಾವಣೆ ಕಂಡುಬಂದಿದೆ. ಈ ಮೊದಲು ತೃತೀಯ ಭಾಷೆಗೆ ಗ್ರೇಡ್ ನೀಡಿ, ಒಟ್ಟು 525 ಅಂಕಗಳಿಗೆ ಫಲಿತಾಂಶ ಪ್ರಕಟಿಸುವುದಾಗಿ ಶಿಕ್ಷಣ ಇಲಾಖೆ ತಿಳಿಸಿತ್ತು. ಆದರೆ, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈಗ ಹಳೆಯ ಪದ್ಧತಿಯನ್ನೇ ಮುಂದುವರಿಸಲಾಗಿದ್ದು, ಹಿಂದಿ ಸೇರಿದಂತೆ ತೃತೀಯ ಭಾಷೆಗೂ ಅಂಕಗಳನ್ನು ನೀಡಲಾಗುತ್ತಿದೆ. ಹೀಗಾಗಿ, ಪರೀಕ್ಷಾ ಮಂಡಳಿಯು ಒಟ್ಟು 625 ಅಂಕಗಳಿಗೆ ಫಲಿತಾಂಶವನ್ನು ಪ್ರಕಟಿಸಲಿದೆ.
ಫಲಿತಾಂಶ ನೋಡುವುದು ಹೇಗೆ?
ಸಚಿವರ ಸುದ್ದಿಗೋಷ್ಠಿಯ ನಂತರ ವಿದ್ಯಾರ್ಥಿಗಳು ಈ ಕೆಳಗಿನ ಲಿಂಕ್‌ಗಳ ಮೂಲಕ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.
ಅಧಿಕೃತ ವೆಬ್‌ಸೈಟ್: karresults.nic.in
ಮೊಬೈಲ್ ಆಪ್: ‘Karnatakaone’ ಮೊಬೈಲ್ ಆಪ್ ಮೂಲಕವೂ ಫಲಿತಾಂಶ ಲಭ್ಯವಿರಲಿದೆ.
ಡಿಜಿ ಲಾಕರ್‌ನಲ್ಲಿ ಅಂಕಪಟ್ಟಿ ಲಭ್ಯ
ಈ ವರ್ಷದ ವಿಶೇಷವೆಂದರೆ, ಪ್ರಥಮ ಬಾರಿಗೆ ವಿದ್ಯಾರ್ಥಿಗಳ ಅಂಕಪಟ್ಟಿಗಳು ಡಿಜಿ ಲಾಕರ್ (DigiLocker) ನಲ್ಲಿ ಲಭ್ಯವಿರಲಿವೆ. ಮಧ್ಯಾಹ್ನ 12 ಗಂಟೆಯ ನಂತರ ವಿದ್ಯಾರ್ಥಿಗಳು digilocker.gov.in ಗೆ ಭೇಟಿ ನೀಡಿ ತಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಗಮನಿಸಿ : ವಿದ್ಯಾರ್ಥಿಗಳು ಫಲಿತಾಂಶದ ಸಮಯದಲ್ಲಿ ವೆಬ್ ಸೈಟ್ ದಟ್ಟಣೆ (Traffic) ಇರುವುದರಿಂದ ಸ್ವಲ್ಪ ಸಮಯ ಕಾಯಬೇಕಾಗಬಹುದು. ಎಲ್ಲ ವಿದ್ಯಾರ್ಥಿಗಳಿಗೂ ಶುಭವಾಗಲಿ. ವಿದ್ಯಾರ್ಥಿಗಳು ಧೈರ್ಯಗೆಡಬೇಡಿ. ಸೋಲೇ ಗೆಲುವಿನ ಸೋಪಾನ ಎಂಬುದು ನಿಮ್ಮ ಮನದಲ್ಲಿರಲಿ.



