ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಕನ್ನಡ-ಹಿಂದಿ ಸಂಘರ್ಷ ಸುದ್ದಿಯಾಗುತ್ತಿದ್ದು, ಕನ್ನಡದಲ್ಲಿ ಆರ್ಡರ್ ಹೇಳಿದ ವ್ಯಕ್ತಿಗೆ ಹೊಟೆಲ್‌ನಲ್ಲಿದ್ದ ಹಿಂದಿ ಭಾಷಾ ಸಿಬ್ಬಂದಿಗಳು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಪರಭಾಷಿಕರ ಹಾವಳಿ ಮಿತಿ ಮೀರುತ್ತಿದ್ದು, ಸ್ವಂತ ನೆಲದಲ್ಲಿ ಕನ್ನಡಿಗರು ಆತಂಕದಿಂದ ಬದುಕಬೇಕಾದ ಪರಿಸ್ಥಿತಿ ಏರ್ಪಟ್ಟಿದೆ. ಇದ್ದಕ್ಕೆ ಇಂಬು ನೀಡುವಂತೆ ಕನ್ನಡಿಗನನ್ನು ಕೆಲ ಹೊಟೆಲ್ ಸಿಬ್ಬಂದಿ ಒಳಗೆಳೆದೊಯ್ದು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಿನ ಹೆಸರಘಟ್ಟ ರಸ್ತೆಯ ಚಿಕ್ಕಬಾಣಾವರ ಬಳಿಯ ಸಪ್ತಗಿರಿ ಆಸ್ಪತ್ರೆ ಬಳಿ ಇರುವ ಗಬ್ರೋ ಬಿಸ್ಟ್ರೋ ಅಂಡ್ ಕೆಫೆ ಹೋಟೆಲ್‌ಗೆ ತೆರಳಿದ್ದ ಕನ್ನಡಿಗ ಗ್ರಾಹಕರೊಬ್ಬರು ಕನ್ನಡದಲ್ಲಿ ಆರ್ಡರ್ ಹೇಳಿದ್ದಾರೆ. ಇದಕ್ಕೆ ಅಲ್ಲಿದ್ದ ಹೊಟೆಲ್ ಸಿಬ್ಬಂದಿ ನನಗೆ ಅರ್ಥವಾಗಿಲ್ಲ. ಹಿಂದಿಯಲ್ಲಿ ಹೇಳು ಎಂದು ಗದರಿದ್ದಾನೆ. ಇದರಿಂದ ಆಕ್ರೋಶಗೊಂಡ ಆತ ಕನ್ನಡದಲ್ಲಿ ಮಾತನಾಡುವಂತೆ ಕೇಳಿದ್ದಾನೆ. ಆದರೆ ಹೋಟೆಲ್ ಸಿಬ್ಬಂದಿ ಕನ್ನಡ ಮಾತಾಡಲ್ಲ ಎಂದು ಜೋರು ಧ್ವನಿಯಲ್ಲೇ ಅವಾಜ್ ಹಾಕಿ, ಮಾತ್ರವಲ್ಲದೇ ಹೋಟೆಲ್‌ನಿಂದ ಹೊರಹೋಗುವಂತೆ ಕೂಗಿದ್ದಾನೆ.
ಇದರಿಂದ ಕೋಪಗೊಂಡ ಕನ್ನಡಿಗ ಮತ್ತೆ ಅಲ್ಲಿದ್ದವರ ಮುಂದೆ ಕರ್ನಾಟಕದಲ್ಲಿ ಕನ್ನಡ ಮಾತನಾಡು ಎಂದು ಕೇಳಿದ್ದಾನೆ. ಈ ವೇಳೆ ಇಬ್ಬರೂ ಪರಸ್ಪರ ಕೊರಳ ಪಟ್ಟಿ ಹಿಡಿದಿದ್ದು, ಇದರಿಂದ ಕೆರಳಿದ ಹೋಟೆಲ್ ಸಿಬ್ಬಂದಿ ತನ್ನ ಸಹೋದ್ಯೋಗಿಗಳೊಂದಿಗೆ ಸೇರಿ ಕನ್ನಡಿಗನನ್ನು ಧರಧರನೇ ಹೋಟೆಲ್ ಒಳಗೆ ಎಳೆದೊಯ್ದು ಹಲ್ಲೆ ನಡೆಸಿದ್ದಾರೆ. ಕನ್ನಡಿಗ ಹಾಗೂ ಹೋಟೆಲ್‌ನಲ್ಲಿದ್ದ ಹಿಂದಿ ಸಿಬ್ಬಂದಿ ನಡುವಿನ ಗಲಾಟೆಯು ಅಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವ್ಯಾಪಕ ಆಕ್ರೋಶ: ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಕನ್ನಡದ ಬಗ್ಗೆ ಧ್ವನಿ ಎತ್ತಿದವನ ಕುತ್ತಿಗೆ ಪಟ್ಟಿ ಹಿಡಿದು ಹೋಟೆಲ್ ಸಿಬ್ಬಂದಿಯೆಲ್ಲ ಹಲ್ಲೆ ನಡೆಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.