ಪ್ರಯಾಗ್‌ರಾಜ್/ಬೆಳಗಾವಿ: ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ತಾಯಿ-ಮಗಳು ಸೇರಿದಂತೆ ನಾಲ್ವರು ಸಾವಿಗೀಡಾಗಿದ್ದಾರೆ.
ಮೃತರನ್ನು ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ್ (50) ಮೇಘಾ ಹತ್ತರವಾಠ್, ಅರುಣ್ ಕೋಪರ್ಡೆ ಹಾಗೂ ಮಹಾದೇವಿ ಎಂದು ಗುರುತಿಸಲಾಗಿದೆ. ಕುಂಭಮೇಳದಲ್ಲಿ ಕಾಲ್ತುಳಿತದ ಬಳಿಕ ಇಬ್ಬರನ್ನೂ ಪ್ರಯಾಗ್‍ರಾಜ್‍ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಸಾವಿಗೀಡಾಗಿದ್ದಾರೆ.
ಬೆಳಗಾವಿಯಲ್ಲಿರುವ ಕುಟುಂಬಸ್ಥರಿಗೆ ಇಂದು (ಬುಧವಾರ) ಬೆಳಗ್ಗೆಯಿಂದ ಇಬ್ಬರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಫೋನ್ ರಿಂಗ್ ಆಗುತ್ತಿದ್ದರೂ, ರಿಸೀವ್ ಮಾಡದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕದಲ್ಲಿದ್ದರು.
ಮೂರು ದಿನಗಳ ಹಿಂದೆ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ 13 ಜನರ ತಂಡದಲ್ಲಿ ಅವರು ತೆರಳಿದ್ದರು ಎಂದು ತಿಳಿದು ಬಂದಿದೆ. ಕಾಲ್ತುಳಿತದಲ್ಲಿ ಸರೋಜಿನಿ ನಡುವಿನಹಳ್ಳಿ, ಕಾಂಚನ್ ಕೋಪಾರ್ಡೆ ಸೇರಿದಂತೆ ಇನ್ನೂ ಕೆಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.