ಬೆಂಗಳೂರು/ಮೈಸೂರು/ಚಾಮರಾಜನಗರ : ಸಫಾರಿ ವಾಹನಗಳ ಕಿರಿಕಿರಿಯಿಂದ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುತ್ತಿವೆಯೇ..? ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿ ವಾಹನಗಳ ಧಾರಣಾ ಸಾಮರ್ಥ್ಯವೆಷ್ಟು..? ಎಂಬ ಬಗ್ಗೆ ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕರ್ನಾಟಕ ವನ್ಯಜೀವಿ ಮಂಡಳಿಯ 20ನೇ ಸಭೆಯಲ್ಲಿ ನಿರ್ಣಯಿಸಲಾಗಿದ್ದು, ಈ ಸಭೆಯಲ್ಲಿ ಅಧ್ಯಕ್ಷರ ಅನುಮತಿಯ ಮೇರೆಗೆ, ವಿಷಯ ಪ್ರಸ್ತಾಪಿಸಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಕಳೆದ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಹುಲಿಗಳ ದಾಳಿಯಿಂದ ಮೂವರು ಮೃತಪಟ್ಟು ಒಬ್ಬರು ಶಾಶ್ವತ ವಿಶೇಷಚೇತನರಾದ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿ ಸ್ಥಗಿತಗೊಳಿಸಲಾಗಿತ್ತು ಎಂದು ತಿಳಿಸಿದರು.
ಅಲ್ಲದೆ ಈ 2 ತಿಂಗಳ ಅವಧಿಯಲ್ಲಿ ಕಾಡಿನ ಹೊರಗೆ ಹುಲಿ ದಾಳಿ ನಡೆದಿಲ್ಲ, ಯಾವುದೇ ಜೀವಹಾನಿ ಆಗಿಲ್ಲ ಎಂದು ಸಭೆಗೆ ವಿವರಿಸಿದರು. ಸಫಾರಿ ವಾಹನದ ಕಿರಿಕಿರಿಯಿಂದ, ವಾಹನಗಳ ಬೆಳಕಿನಿಂದ ವನ್ಯಜೀವಿಗಳು ಹೊರಬರುತ್ತವೆ ಎಂಬುದು ಸ್ಥಳೀಯರು ಮತ್ತು ರೈತರ ಆರೋಪವಾಗಿದ್ದು, ಈ ಬಗ್ಗೆ ಅಧ್ಯಯನ ನಡೆಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
1972ರಲ್ಲಿ ಬಂಡೀಪುರದಲ್ಲಿ ಕೇವಲ 12 ಹುಲಿ ಇತ್ತು. ಇಂದು ಸುಮಾರು 175-200 ಹುಲಿಗಳಿವೆ. ಒಂದು ಹುಲಿ ಸ್ವಚ್ಛಂದವಾಗಿ ಜೀವಿಸಲು 10 ಚದರ ಕಿಲೋ ಮೀಟರ್ ಪ್ರದೇಶ ಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ 900 ಚದರ ಕಿಲೋ ಮೀಟರ್ ಕಾಡಿನಲ್ಲಿ 2 ಪಟ್ಟು ಹುಲಿಗಳಿವೆ ಇದು ಸಹ ಹುಲಿಗಳು ಕಾಡಿನಿಂದ ನಾಡಿನತ್ತ ಬರಲು ಕಾರಣವಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ವನ ಮತ್ತು ವನ್ಯಜೀವಿ ವಿಭಾಗದ ರಾಯಭಾರಿ ಅನಿಲ್ ಕುಂಬ್ಳೆ ವನ್ಯಜೀವಿಗಳು ಕಾಡಿನಿಂದ ಹೊರಗೆ ಬರುವುದಕ್ಕೂ ಸಫಾರಿಗೂ ಸಂಬಂಧವಿಲ್ಲ, ಸಫಾರಿಗೆ ಕೇವಲ ಶೇ.8ರಷ್ಟು ಅರಣ್ಯ ಪ್ರದೇಶವೂ ಬಳಕೆ ಆಗುವುದಿಲ್ಲ, ಸ್ಥಳೀಯರ ಜೀವನೋಪಾಯವೂ ಇದರಲ್ಲಿ ಅಡಗಿದೆ. ಹೀಗಾಗಿ ಪುನರ್ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಸಫಾರಿ ಸ್ಥಗಿತಗೊಳಿಸಿರುವುದರಿಂದ ಸ್ಥಳೀಯರ ಜೀವನೋಪಾಯಕ್ಕೂ ತೊಂದರೆ ಆಗಿದೆ, ಪ್ರವಾಸೋದ್ಯಮಕ್ಕೂ ಪೆಟ್ಟು ಬಿದ್ದಿದೆ ಎಂದರೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ.ರೇ ಹಂತ ಹಂತವಾಗಿ ಸಫಾರಿ ಆರಂಭಿಸುವುದು ಸೂಕ್ತ ಎಂದು ತಿಳಿಸಿದ್ದಾರೆ.
ಈ ಸಭೆಯಲ್ಲಿ ಇದೇ ಅಭಿಪ್ರಾಯ ವ್ಯಕ್ತವಾಗಿದ್ದು, ಎಲ್ಲರ ಅಭಿಪ್ರಾಯ ಆಲಿಸಿದ ಮುಖ್ಯಮಂತ್ರಿಯವರು ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿಗೆ ಬರುವುದು ಏಕೆ ಎಂಬ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ತಜ್ಞರ ಸಮಿತಿಯನ್ನ ರಚಿಸುವಂತೆ ಸೂಚಿಸಿದರು.



