ಆನೇಕಲ್: ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮೇಲ್ಮನೆ ಸದಸ್ಯ ಸಿಪಿ ಯೋಗೇಶ್ವರ್ ಭವಿಷ್ಯ ನುಡಿದಿದ್ದು, ಆಡಳಿತಾರೂಢ ಕಾಂಗ್ರೆಸ್ ವಿರುದ್ಧವೇ ಪಕ್ಷದ ಶಾಸಕರಿದ್ದು ಅದು ಬೂದಿ ಮುಚ್ಚಿದ ಕೆಂಡದಂತಿದೆ ಎಂದು ಹೇಳಿದರು.
ಅವರು ಅನೇಕಲ್ ತಾಲೂಕಿನ ಚಂದಾಪುರದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ನಡೆದ ಬಿಜೆಪಿ ಮತ್ತು ಜೆಡಿಎಸ್ ಜಂಟಿ ಸಮಾವೇಶ ಹಾಗೂ ಪ್ರಚಾರ ಸಭೆಯಲ್ಲಿ ಸಹಸ್ರಾರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ನಮ್ಮ ರಾಜ್ಯದಿಂದ ೨೮ ಕ್ಷೇತ್ರಗಳನ್ನೂ ಬಿಜೆಪಿ ಮಡಿಲಿಗೆ ತುಂಬಬೇಕೆಂದು ಕಾರ್ಯಕರ್ತರನ್ನು ಹುರಿದುಂಬಿಸಿದರು. ಬಿಜೆಪಿ ಶಾಸಕ ಮುನಿರತ್ನ ಮಾತನಾಡಿ, ಡಾ.ಮಂಜುನಾಥ್‌ರವರು ಯಶಸ್ವಿ ವೈದ್ಯರಾಗಿದ್ದು, ತಮ್ಮ ಪಾಲಿನ ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸಿ ರಾಜ್ಯದ ಜನ ಮಾನಸದಲ್ಲಿ ನೆಲೆಸಿದ್ದಾರೆ.
ಕರ್ತವ್ಯ ನಿಷ್ಠೆಗೆ ಹೆಸರಾಗಿರುವ ಅವರು ಸಿದ್ದರಾಮಯ್ಯನವರ ಆದಿಯಾಗಿ ಎಲ್ಲಾ ಮುಖಂಡರರಿಂದ ಪ್ರಶಂಸೆಗೆ ಒಳಗಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಡಾ. ಮಂಜುನಾಥ್ ರವರ ಗೆಲುವಿಗೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಿ ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕು. ಅವರು ಇನ್ನೂ ಹೆಚ್ಚಿನ ಸ್ಥಾನ ಪಡೆದು ದೇಶಾಸ್ಯಂತ ಬಡ ಜನಗಳ ಸೇವೆ ಸಲ್ಲಿಸಲೂ ಅವಕಾಶ ಒದಗಿಬರಬಹದೆಂದು ಹೇಳಿದರು.