ಬೆಂಗಳೂರು: ರಾಜ್ಯದಲ್ಲಿ ಬೆಟ್ಟಿಂಗ್ (ಜೂಜಾಟ) ದಂಧೆ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರಕಾರ, ಇದೀಗ ಹೊಸ ಮಸೂದೆಯನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಿದೆ. ಮುಂಬರಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಬೆಟ್ಟಿಂಗ್ ನಿಯಂತ್ರಣಕ್ಕೆ ಹೊಸ ಮಸೂದೆ ಮಂಡಿಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.
ಹೊಸ ಮಸೂದೆಯ ಅನ್ವಯ ಯಾವುದೇ ಆಟ, ಸ್ಪರ್ಧೆ ಅದೃಷ್ಟದಿಂದ ಗೆಲ್ಲುವ ಹಾಗಿದ್ದರೆ ಆ ರೀತಿಯ ಆಟಗಳನ್ನ ನಿಷೇಧ ಮಾಡಲಾಗುತ್ತದೆ. ಆದರೆ, ಆಟ (ಗೇಮ್) ಸ್ಕಿಲ್ ಹೊಂದಿರುವ ಆನ್‌ಲೈನ್ ಗೇಮಿಂಗ್‌ಗೆ ವಿನಾಯಿತಿ ನೀಡಲಾಗಿದ್ದು, ಆಟ ಆಡುವವರ ಕೌಶಲ್ಯದ ಮೇಲೆ ಗೆಲುವು ನಿರ್ಧಾರವಾಗುವುದಿದ್ದರೆ ಅವುಗಳನ್ನ ನಿಷೇಧ ಮಾಡಲಾಗುವುದಿಲ್ಲ. ಆದರೆ, ಈ ಆಟಗಳು ಸರಿಯಾದ ಪರವಾನಗಿಯನ್ನ ಹೊಂದಿರಬೇಕು. ಇಲ್ಲದಿದ್ದಲ್ಲಿ ಅವುಗಳಿಗೂ ನಿಷೇಧ ಹೇರಲಾಗುತ್ತದೆ ಎಂದು ಹೇಳಲಾಗಿದೆ.
ಪ್ರಾಧಿಕಾರ ರಚನೆ:
ಬೆಟ್ಟಿಂಗ್ ನಿಯಂತ್ರಣಕ್ಕೆ ಪ್ರಾಧಿಕಾರ ರಚನೆ ಮಾಡಲು ಉದ್ದೇಶಿಸಿದ್ದು, ಆನ್ ಲೈನ್ ಮೂಲಕ ನಡೆಯುವ ಎಲ್ಲಾ ಆಟಗಳ ಮೇಲೆ ಸರಕಾರ ನಿಗಾ ಇಡಲಿದೆ.
ಇನ್ನು ಮುಖ್ಯವಾಗಿ ಮಾನದಂಡಗಳ ಪ್ರಕಾರ ಆಟಗಳನ್ನು ಪ್ರತ್ಯೇಕ ಮಾಡುವ ಜವಾಬ್ದಾರಿ ಈ ಪ್ರಾಧಿಕಾರದ್ದಾಗಿದ್ದು, ಕೌಶಲ್ಯ ಆಧಾರಿತ ಗೇಮಿಂಗ್ ವೇದಿಕೆಗಳಿಗೆ ಪರವಾನಿಗೆ ನೀಡಲು ಮಸೂದೆಯಲ್ಲಿ ಅವಕಾಶ ಕಲ್ಪಸಲಾಗಿದೆ.
ಕಾನೂನು ಬಾಹಿರ ಬೆಟ್ಟಿಂಗ್ ಚಟುವಟಿಕೆ ಮೇಲೆ ನಿಗಾ ಇಡುವುದರ ಜೊತೆಗೆ ಆನ್‌ಲೈನ್ ಬೆಟ್ಟಿಂಗ್‌ನ ಅಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲು ಸರಕಾರ ಮುಂದಾಗಿದೆ.
ಕಾನೂನು ಉಲ್ಲಂಘನೆ ಮಾಡಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ – ಜೂಜಾಟ ನಡೆಸಿದರೆ 3 ವರ್ಷ ವರೆಗೆ ಜೈಲು ಮತ್ತು ₹5 ಲಕ್ಷದವರೆಗೆ ದಂಡ. ಜಾಹೀರಾತು ಮೂಲಕ ಬೆಟ್ಟಿಂಗ್ ಪ್ರೋತ್ಸಾಹಿಸಿದರೆ 6 ತಿಂಗಳು ಜೈಲು ಹಾಗೂ ₹10,000 ದಂಡ ವಿಧಿಸಲಾಗುತ್ತದೆ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.