ಎಡತೊರೆ ಮಹೇಶ್
ಹೆಚ್.ಡಿ.ಕೋಟೆ : ಆನೆ ಸೆರೆ ಕಾರ್ಯಾಚರಣೆಯಲ್ಲಿ ಮೃತಪಟ್ಟ ಅರ್ಜುನ ಆನೆಯ ನೆನಪಿನಾರ್ಥವಾಗಿ ದಸರಾದ ಅತ್ಯುತ್ತಮ ಮಾವುತರಿಗೆ ‘ಅರ್ಜುನ ಪ್ರಶಸ್ತಿ’ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಶಾಸಕ ಅನಿಲ್‌ಚಿಕ್ಕಮಾದು ಹೇಳಿದರು. ಸಕಲೇಶಪುರ ತಾಲ್ಲೂಕಿನ ಯಸಳೂರು ಗ್ರಾಮದ ದುಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಆನೆ ಸೆರೆ ಹಿಡಿಯಲು ಹೋದ ಅರ್ಜುನ ಆನೆಯು ಕಾಡಾನೆಯೊಂದಿಗೆ ಸೆಣಸಾಡಿ ವೀರ ಮರಣವನ್ನಪ್ಪಿದ ಸ್ಥಳಕ್ಕೆ ಭೇಟಿ ನೀಡಿ ಅರ್ಜುನ ಆನೆಯ ಸಮಾಧಿಗೆ ಶಾಸಕ ಅನಿಲ್‌ಚಿಕ್ಕಮಾದು ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿ ಮಾತನಾಡಿದರು.
ಅರ್ಜುನ ಆನೆಯು ೮ಬಾರಿ ಅಂಬಾರಿಯನ್ನು ಹೊತ್ತು ತಾಲ್ಲೂಕಿಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದೆ. ಅರ್ಜುನ ಆನೆಯ ಸಾವಿನಿಂದ ರಾಜ್ಯಕ್ಕೆ ತುಂಬಲಾರದ ನಷ್ಟ ಮತ್ತು ನೋವು ಉಂಟಾಗಿದೆ. ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಬಳ್ಳೆ ಆನೆ ಶಿಬಿರದಲ್ಲಿದ್ದ ಈ ಆನೆ ಪ್ರವಾಸಿಗರಿಗೆ, ರಾಜಕಾರಣಿಗಳಿಗೆ ಜನರಿಗೆ ಅಚ್ಚುಮೆಚ್ಚಿನದಾಗಿತ್ತು. ಬಹುತೇಕ ಪ್ರದೇಶಗಳಲ್ಲಿ ಹುಲಿ, ಚಿರತೆ ಕಾಡಾನೆ ಸೆರೆ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುತ್ತಿತ್ತು.
ಆನೆ ಸಾವಿನ ಕುರಿತಂತೆ ತನಿಖೆ ನಡೆಸಲು ಸರ್ಕಾರಕ್ಕೆ ಒತ್ತಾಯ ಮಾಡಿದ್ದು, ತನಿಖೆ ಮುಂದುವರೆದಿದೆ.
ಅರ್ಜುನ ಆನೆಯ ಸಾವಿನ ಸಂದರ್ಭದಲ್ಲಿ ಬೆಳಗಾವಿ ಅಧಿವೇಶನದಲ್ಲಿ ಭಾಗಿಯಾದ್ದರಿಂದ ಇದರ ಅಂತ್ಯಸoಸ್ಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಆದ್ದರಿಂದ ಇಂದು ಕ್ಷೇತ್ರದ ಜನತೆಯ ಪರವಾಗಿ ಕಾರ್ಯಕರ್ತರು, ಮುಖಂಡರು ಹಾಗೂ ಛಾಯಾಗ್ರಾಹಕ ಸಂಘದವರ ಜೊತೆಗೂಡಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಅರ್ಜುನ ಆನೆಗೆ ನಮನ ಸಲ್ಲಿಸುತ್ತಿದ್ದೇವೆ. ಅರ್ಜುನ ಆನೆಯ ಸಾವಿನ ನೆನಪಿನಾರ್ಥವಾಗಿ ಪ್ರತಿ ವರ್ಷ ದಸರಾದ ಅತ್ಯುತ್ತಮ ಮಾವುತರಿಗೆ ‘ಅರ್ಜುನ ಪ್ರಶಸ್ತಿ’ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಾಗೆಯೇ ಹೆಚ್.ಡಿ.ಕೋಟೆ ಆನೆ ಶಿಬಿರದ ಬಳ್ಳೆಯಲ್ಲಿ ಅಥವಾ ಮೈಸೂರಿನಲ್ಲಿ ಸ್ಮಾರಕವನ್ನು ನಿರ್ಮಿಸಲು ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರಿಗೆ ಮನವಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.
ಈ ವೇಳೆಯಲ್ಲಿ ಹೆಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್‌ಚಿಕ್ಕಮಾದು, ಮುಖಂಡರಾದ ಪ್ರದೀಪ್, ಚಿಕ್ಕವೀರನಾಯಕ, ಪರಶಿವಮೂರ್ತಿ, ಛಾಯಾಗ್ರಾಹಕ ಸಂಘದ ಅಧ್ಯಕ್ಷ ಬಾಲುಸುಬ್ರಹ್ಮಣ್ಯ, ಉಪಾಧ್ಯಕ್ಷ ವನಸಿರಿಶಂಕರ್, ಪ್ರಧಾನ ಕಾರ್ಯದರ್ಶಿ ಮನೋಜ್‌ಕೋಟೆ, ತ್ರಿಶಂಭು, ಸಲಹೆಗಾರರಾದ ಜಿ. ರಘುರಾಮ, ಮಹದೇವಸ್ವಾಮಿಕೋಟೆ, ಕೃಷ್ಣ ಬೆಳತ್ತೂರು, ರವಿಚಿಕ್ಕೆರೆಯೂರು, ಮುರುಳೀಧರ್, ವೆಂಕಿ, ಕುಮಾರ್ ಕಟ್ಟೇಮನುಗನಹಳ್ಳಿ ಹಾಗೂ ಇನ್ನಿತರರು ಇದ್ದರು.