ಹುಬ್ಬಳ್ಳಿ: ರಾಜ್ಯ ಸರ್ಕಾರ ಎಲ್ಲ ದರಗಳನ್ನೂ ಏರಿಸುತ್ತಿದೆ, ಹಣಕಾಸಿನ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮೆಟ್ರೋ ದರ ಏರಿಕೆ ವಿಚಾರವಾಗಿ ಮಾತನಾಡಿದ ಅವರು, ಮೆಟ್ರೋ ದರ ಏರಿಕೆ ಮಾಡಿದ್ದು ನಾವಲ್ಲ. ದರ ನಿಗದಿ ಮಾಡುವ ಒಂದು ಸಮಿತಿ ಇದೆ. ಆದರೆ ಈ ಮೆಟ್ರೋ ದರ ಏರಿಕೆ ವಿಚಾರದಲ್ಲಿ ಎಲ್ಲ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರುತ್ತದೆ. ಅದರಲ್ಲಿ ರಾಜ್ಯ ಅಧಿಕಾರಿಗಳಿರುತ್ತಾರೆ. ಅದಕ್ಕೆ ರಾಜ್ಯ ಸರ್ಕಾರವೇ ಶಿಫಾರಸ್ಸು ಮಾಡಿದೆ. ಮುಖ್ಯಮಂತ್ರಿಗಳು ದರ ಏರಿಕೆ ವಿಚಾರವಾಗಿ ನಿರ್ದೇಶನ ಕೊಟ್ಟಿರುವುದೇ ಅದಕ್ಕೆ ಸಾಕ್ಷಿ ಎಂದು ತಿಳಿಸಿದರು.
ಮುಂದುವರೆದು ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಅದಕ್ಕೆ ವಿದ್ಯುತ್, ನೀರು, ಹಾಲಿನ ದರ ಸೇರಿದಂತೆ ಎಲ್ಲ ದರಗಳನ್ನೂ ಏರಿಸುತ್ತಿದೆ. ಸರ್ಕಾರ ಹಣಕಾಸಿನ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು.