Thursday, December 4, 2025
Google search engine

Homeರಾಜಕೀಯಬಿಎಸ್‌ವೈ ವಿರುದ್ಧದ ಆರೋಪ ತನಿಖೆಗೆ ರಾಜ್ಯ ಸರ್ಕಾರ ಆದೇಶ

ಬಿಎಸ್‌ವೈ ವಿರುದ್ಧದ ಆರೋಪ ತನಿಖೆಗೆ ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಸುರೇಶ್ ಗೌಡ ಮಾಡಿರುವ ಆರೋಪ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ನಡುವೆ ಆರೋಪ ಸಂಬಂಧ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಕಚೇರಿ ಬುಧವಾರ ಗೃಹ ಸಚಿವ ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದು, ತನಿಖೆಗೆ ಆದೇಶಿಸಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಅಧ್ಯಕ್ಷ ಎಚ್. ಜಿ. ರಮೇಶ್ ಅವರು ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದು, ಸುರೇಶ್ ಗೌಡ ಅವರು ಮಾಡಿರುವ ಆರೋಪ ಕುರಿತು ಪ್ರಸ್ತಾಪಿಸಿದ್ದಾರೆ. ಪತ್ರದಲ್ಲಿ, ಯಡಿಯೂರಪ್ಪ ಒಂದು ಮಾಧ್ಯಮ ಸಂಸ್ಥೆಗೆ 5 ಕೋಟಿ ರೂ. ಪಾವತಿಸಿದ್ದು, ಭೂ ಸಂಬಂಧಿತ ವಿಷಯಗಳಲ್ಲಿ ಮತ್ತೊಂದು ಮಾಧ್ಯಮ ಸಂಸ್ಥೆಗೆ ಅಕ್ರಮವಾಗಿ ಹಣದ ನೆರವು ನೀಡಿದ್ದಾರೆಂದು ತಿಳಿಸಿದ್ದಾರೆ. ಹಾಗೂ ಹಿಂದಿನ ಬಿಜೆಪಿ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ಆರ್‌ಎಸ್‌ಎಸ್‌ಗೆ ವಿವಿಧ ಕಾನೂನುಬಾಹಿರ ಅನುಕೂಲಗಳನ್ನು ನೀಡಿದೆ ಎಂದು ಆರೋಪಿಸಲಾಗಿದೆ.

ಈ ಆರೋಪಗಳು ಗಂಭೀರವಾಗಿದ್ದು ಸಾರ್ವಜನಿಕ ಪ್ರಾಮಾಣಿಕತೆ, ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗಕ್ಕೆ ಸಂಬಂಧಿಸಿದ್ದಾಗಿದೆ. ಈ ಆರೋಪಗಳನ್ನು ಪರಿಶೀಲಿಸಲು ಮತ್ತು ಕಾನೂನಿನ ಪ್ರಕಾರ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲು ಗೃಹ ಇಲಾಖೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಇನ್ನೂ ಮುಖ್ಯಮಂತ್ರಿಗಳ ಖಾಸಗಿ ಕಾರ್ಯದರ್ಶಿ ಡಾ. ಕೆ. ವೆಂಕಟೇಶ ಅವರು ಸಹಿ ಮಾಡಿರುವ ಪತ್ರದಲ್ಲಿ, ಮೂಲ ದೂರು ಮತ್ತು ಸಾಕ್ಷ್ಯಗಳನ್ನು ಗೃಹ ಸಚಿವರಿಗೆ ಕಳುಹಿಸಲಾಗಿದ್ದು, ಸೂಕ್ತ ಸಂಸ್ಥೆಯ ಮೂಲಕ ವಿವರವಾದ ತನಿಖೆಯನ್ನು ಪ್ರಾರಂಭಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಲಾಗಿದೆ. ಇದೇ ವೇಳೆ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆಯೂ ಸೂಚಿಸಲಾಗಿದೆ ಎಂದ ಮೂಲಗಳು ತಿಳಿಸಿವೆ.

ಪತ್ರದ ಪ್ರತಿಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಲಾಗಿದೆ. ಮುಖ್ಯಮಂತ್ರಿಗಳ ಕಚೇರಿ ಸೂಚನೆ ಬೆನ್ನಲ್ಲೇ ಇದೀಗ ಗೃಹ ಸಚಿವರು ಯಾವ ತನಿಖಾ ವಿಭಾಗಕ್ಕೆ ಪ್ರಕರಣವನ್ನು ಹಸ್ತಾಂತರಿಸಲಿದ್ದಾರೆಂಬುದು ಕುತೂಹಲ ಮೂಡಿಸಿದೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular