ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪರಿಶಿಷ್ಟರ ಹಣವನ್ನು ಬಳಸಿಕೊಳ್ಳಲು ಮುಂದಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಟೀಕೆ ಮಾಡಿದ್ದು ತಮ್ಮ ಎಕ್ಸ್ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.
ಶೋಷಿತ ಸಮುದಾಯಗಳನ್ನು ನಿರಂತರ ವಂಚಿಸಿ ಅಧಿಕಾರ ಕಬಳಿಸುತ್ತಾ ಬಂದಿರುವ ಕಾಂಗ್ರೆಸ್ ಸರ್ಕಾರ ಈ ಬಾರಿಯೂ ತನ್ನ ಆಡಳಿತದಲ್ಲಿ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾದ ನಿಧಿಯಲ್ಲಿ ಈ ವರ್ಷದ (2025–26) ಒದಗಿಸಿದ್ದ ₹11,896.84 ಕೋಟಿ ರೂಗಳನ್ನು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹಂಚಿಕೆ ಮಾಡುವ ಮೂಲಕ ತನ್ನ ಗ್ಯಾರಂಟಿ ಯೋಜನೆಗಳಿಗಾಗಿ ಬಳಸಿಕೊಳ್ಳಲು ಮುಂದಾಗಿದೆ ಎಂದು ಆರ್.ಅಶೋಕ್ ಛೇಡಿಸಿದ್ದಾರೆ. ಇದು ಸಾಮಾಜಿಕ ನ್ಯಾಯವ್ಯವಸ್ಥೆಯ ಉದ್ದೇಶದ ಅಸ್ತಿತ್ವವನ್ನೇ ಅಲುಗಾಡಿಸಲು ಹೊರಟ ದಲಿತ ದ್ರೋಹಿ ಕ್ರಮವಾಗಿದೆ. ಮಾತೆತ್ತಿದರೆ ತಾವು ಅಹಿಂದ ನಾಯಕರು, ದಲಿತರ ಉದ್ಧಾರಕರು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಮುಖ್ಯಮಂತ್ರಿ ಸಿಎಂ ಸಿದ್ಧರಾಮಯ್ಯನವರು ನವರು ದಲಿತರ ಉದ್ಧಾರಕ್ಕೋಸ್ಕರ ಮೀಸಲಿರುವ ಈ ವರ್ಷದ ಹಣವನ್ನೂ ಸಹ ಗ್ಯಾರಂಟಿಗೆ ವರ್ಗಾವಣೆ ಮಾಡಿ ದಲಿತರಿಗೆ ಮತ್ತೆ ಅನ್ಯಾಯ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯ ನಡೆಯಾಗಿದೆ ಎಂದು ಅಶೋಕ್ ಕಿಡಿಕಾರಿದ್ದಾರೆ.
ಸದ್ಯ ಕಳೆದ ವರ್ಷದ ಅನುದಾನವನ್ನೆಲ್ಲ ಗ್ಯಾರಂಟಿಗಳಿಗೆ ಬಳಸಿ, ST ಸಮುದಾಯದ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಲೂಟಿಹೊಡೆದಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ, ಇದೀಗ ದಲಿತರ ಶ್ರೇಯೋಭಿವೃದ್ಧಿಗೆ ಇದ್ದ ಹಣವನ್ನೆಲ್ಲ ಗ್ಯಾರಂಟಿಗಳಿಗೆ ಬಳಸಿ ರಾಜ್ಯದ ಪರಿಶಿಷ್ಟ ಸಮುದಾಯದ ಕಲ್ಯಾಣ ಕಾರ್ಯಗಳಿಗೆ ‘ಇತಿ ಶ್ರೀ’ ಹಾಡಲು ಹೊರಟಿರುವ ಕ್ರಮವನ್ನು ಬಿಜೆಪಿ ಸಹಿಸುವ ಮಾತೇ ಇಲ್ಲ, ಈ ನಿರ್ಧಾರದಿಂದ ರಾಜ್ಯ ಸರ್ಕಾರ ಈ ಕೂಡಲೇ ಹಿಂದೆ ಸರಿಯದಿದ್ದರೆ ಪರಿಷ್ಠರ ಪರ ದನಿ ಎತ್ತಿ ಸದನದ ಒಳಗೆ ಹೊರಗೆ ಹೋರಾಟ ನಡೆಸಲಿದೆ ಎಂದು ಆರ್ . ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ಬಾರಿಯೂ ಸಹ ಬಿಜೆಪಿ ಇದೇ ಆರೋಪವನ್ನು ಮಾಡಿತ್ತು. ಕಾಂಗ್ರೆಸ್ ತನ್ನ ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಎಸ್‌ಸಿಎಸ್‌ಟಿಪಿಎಸ್ ನಿಧಿಯನ್ನು ದುರ್ಬಳಕೆ ಮಾಡುತ್ತಿದೆ ಎಂದು ಬಿಜೆಪಿ ಪ್ರತಿಭಟನೆಯನ್ನೂ ನಡೆಸಿತ್ತು.