ಮದ್ದೂರು: ರಾಜ್ಯ ಸರ್ಕಾರದ ಜನಪರ ಯೋಜನೆಗಳು, ಗ್ಯಾರೆಂಟಿ ಯೋಜನೆಗಳು ಲೋಕಸಭಾ ಚುನಾವಣೆಯಲ್ಲಿ ಕೈ ಹಿಡಿಯಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ತಾಲೂಕಿನ ಕೊಪ್ಪ ಹೋಬಳಿಯ ಮರಳಿಗ ಗ್ರಾಮದಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆಗೂ ಮೊದಲೇ ಹೇಳಿದ್ದಂತೆ ಪಕ್ಷವು ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು..
ಬರಗಾಲವಿದ್ದರೂ ಹಲವಾರು ಅಭಿವೃದ್ಧಿ ಯೋಜನೆಗಳನ್ನು ರಾಜ್ಯ ಸರ್ಕಾರವು ಹಮ್ಮಿಕೊಂಡಿದ್ದು ಕೃಷಿ ಇಲಾಖೆಯ ಮೂಲಕ 1400 ಕೋಟಿ ಬೆಳೆ ವಿಮೆಯನ್ನು ರಾಜ್ಯದ ರೈತರಿಗೆ ಇದೇ ಮಾರ್ಚ್ ಅಂತ್ಯದೊಳಗೆ ವಿತರಿಸಲಾಗುತ್ತದೆ ಹಾಗೂ ಬೆಳೆ ನಷ್ಟ ಸರ್ವೆ ಮಾಡಿ ರೈತರಿಗೆ 2 ಸಾವಿರ ರೂಗಳನ್ನು ನೀಡಲಾಗಿದೆ ಎಂದರು.
ಗ್ರಾಮೀಣ ಭಾಗದ ಮಹಿಳೆಯರಿಗೆ ಬಡ್ಡಿ ರಹಿತ ಸಾಲವನ್ನು ನೀಡುವುದು ಸೇರಿದಂತೆ ಆಡಳಿತ ಯಂತ್ರಕ್ಕೆ ಚುರುಕು ತಂದಿದ್ದು ಜಿಲ್ಲೆಯಲ್ಲಿದ್ದ ಸುಮಾರು 9 ಸಾವಿರ ಕಂದಾಯ ಇಲಾಖೆಗೆ ಸಂಬಂಧಿಸಿದಂತಹ ಅರ್ಜಿಗಳಲ್ಲಿ 8 ಸಾವಿರ ಅರ್ಜಿಗಳಿಗೆ ಪರಿಹಾರ ಒದಗಿಸಿ ಇತ್ಯರ್ಥಪಡಿಸಲಾಗಿದೆ ಎಂದರು.
ಇತ್ತೀಚೆಗೆ ರಾಜ್ಯ ಬಜೆಟ್ ನಲ್ಲಿ ಜಿಲ್ಲೆಯ ಜೀವನಾಡಿ ಮೈ ಶುಗರ್ನ ನೂತನ ಕಾರ್ಖಾನೆ, ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾಲಯ ಆರಂಭಿಸುವುದಕ್ಕೆ ಯೋಜನೆ ರೂಪಿಸಲಾಗಿದೆ ಎಂದ ಅವರು ಕೊಪ್ಪ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಹೆಚ್ಚು ಒತ್ತು ನೀಡಲಾಗುವುದು ಎಂದರು.
ಈ ಎಲ್ಲಾ ರಾಜ್ಯ ಸರ್ಕಾರದ ಯೋಜನೆಗಳನ್ನು ರಾಜ್ಯದ ಜನರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕೆಕ ಆಶೀರ್ವದಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಸಾರ್ವಜನಿಕರ ಹಾಗೂ ರೈತರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸುವ ದೃಷ್ಟಿಯಿಂದ ಜನ ಸಂಪರ್ಕ ಸಭೆಗಳನ್ನು ಆಯೋಜಿಸಲಾಗಿದ್ದು 30 ದಿನದೊಳಗೆ ಕಾನೂನು ವ್ಯಾಪ್ತಿಯಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ನಾನು ಸಚಿವನಾಗಿರುವುದರಿಂದ ಹೆಚ್ಚಿನ ಜವಾಬ್ದಾರಿ ನನ್ನ ಮೇಲಿದೆ. ರಾಜ್ಯದ ಕೃಷಿ ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ ಮಂಡ್ಯ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿ ಮಾಡುವ ಇಗಿತ ಹೊಂದಿದ್ದೇನೆ. ಆದ್ದರಿಂದ ಪ್ರತಿ ಗ್ರಾಮ ಪಂಚಾಯಿತಿಗೂ ನಾನು ಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅಧಿಕಾರಿಗಳು ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವ ಮೂಲಕ ಜನಪರ ಆಡಳಿತ ನೀಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ತಾಲೂಕಿನ ತಗ್ಗಹಳ್ಳಿ ಮತ್ತು ಬೆಕ್ಕಳಲ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಸಹ ಜನಸಂಪರ್ಕ ಸಭೆಗಳನ್ನು ನಡೆಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಸುರೇಶ್, ಉಪಾಧ್ಯಕ್ಷ ನೀಲಮ್ಮ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ. ಜೋಗಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್. ದಿವಾಕರ್, ಲೋಕಸಭಾ ಸಂಭಾವ್ಯ ಅಭ್ಯರ್ಥಿ ವೆಂಕಟರಮಣಗೌಡ (ಸ್ಟಾರ್ ಚಂದ್ರು), ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ, ತಹಸೀಲ್ದಾರ್ ಕೆ.ಎಸ್. ಸೋಮಶೇಖರ್, ತಾ.ಪಂ ಇಒ ಮಂಜುನಾಥ್, ನರೇಗಾ ಸಹಾಯಕ ನಿರ್ದೇಶಕ ಟಿ.ವಿ. ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್. ಕಾಳೀರಯ್ಯ, ಮುಖಂಡರಾದ ಎಂ.ಬಿ. ವೆಂಕಟೇಶ್, ವಾಸು, ಸ್ವಾಮಿ, ಕೋಣಸಾಲೆ ರಘು, ಯೋಗಾನಂದ, ಸೋಮಶೇಖರ್, ಚೆನ್ನಕೇಶವ, ಮರಲಿಂಗಯ್ಯ, ವೆಂಕಟೇಶ್, ಕೃಷ್ಣೇಗೌಡ, ಶ್ರೀನಿವಾಸ್, ರವೀಂದ್ರ, ವಕೀಲ ಸತ್ಯಪ್ಪ ಸೇರಿದಂತೆ ಇತರರಿದ್ದರು.