ಮಂಡ್ಯ: ಕಾವೇರಿಗಾಗಿ ರೈತರಿಂದ ವಿಭಿನ್ನವಾಗಿ ಕಡಲೆಪುರಿ ಚಳವಳಿ ನಡೆಸಲಾಗಿದ್ದು, ಕಡಲೆಪುರಿ ತಿಂದು ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ 46ನೇ ದಿನದ ರೈತ ಹಿತರಕ್ಷಣಾ ಸಮಿತಿ ಧರಣಿಯಲ್ಲಿ ವಿಭಿನ್ನ ಚಳವಳಿ ನಡೆಸಲಾಗಿದೆ.
ತಮಿಳುನಾಡಿಗೆ ನೀರು ಬಿಟ್ಟಿರುವುದನ್ನ ತೀವ್ರವಾಗಿ ಖಂಡಿಸಿರುವಪ್ರತಿಭಟನಾಕಾರರು, ಧರಣಿ ಸ್ಥಳದಲ್ಲೇ ಕಡಲೆ ಪುರಿ ತಿಂದು ರಾಜ್ಯ ಸರ್ಕಾರ ಕಡಲೆಪುರಿ ಭಾಗ್ಯ ಕೊಟ್ಟಿದೆ ಎಂದು ಕಿಡಿಕಾರಿದ್ದಾರೆ.
ಸಂಸದರು, ಶಾಸಕರು, ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಗ್ರಾ.ಪಂ.ಮಟ್ಟದಲ್ಲಿ ಜನಸಾಮಾನ್ಯರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಪ್ರತಿನಿತ್ಯ ಒಂದೊಂದು ಗ್ರಾ.ಪಂ.ವ್ಯಾಪ್ತಿಯ ಹಳ್ಳಿಗಳಿಂದ ಬಂದು ಧರಣಿಗೆ ಬೆಂಬಲ ನೀಡಲಿದ್ದಾರೆ.
ತಕ್ಷಣವೇ ಸರ್ಕಾರ ಜಂಟಿ ವಿಶೇಷ ಅಧಿವೇಶನ ಕರೆಯಬೇಕು. ರೈತರನ್ನ ಸಂಕಷ್ಟಕ್ಕೆ ಸಿಲುಕಿಸಿ ವಿಜೃಂಭಣೆಯಿಂದ ದಸರಾ ಆಚರಣೆ ಮಾಡ್ತಿದೆ. ಇಂತಹ ಸಂದರ್ಭದಲ್ಲಿ ದಸರಾ ಆಚರಣೆ ಅವಶ್ಯಕತೆ ಇತ್ತಾ? ಕೃಷಿ ಬೆಳೆಗೆ ಅವಕಾಶ ನೀಡದೆ ಅನ್ನಭಾಗ್ಯ ಬಿಟ್ಟು ರೈತರಿಗೆ ಕಡಲೆಪುರಿ ಭಾಗ್ಯ ಕೊಟ್ಟಿದೆ. ವಿಶೇಷ ಅಧಿವೇಶನ ಕರೆದು ಕಾವೇರಿ ವಿಚಾರ ಚರ್ಚೆ ಮಾಡಿ ತಕ್ಷಣವೇ ನೀರು ನಿಲ್ಲಿಸಿ. ರೈತರನ್ನ ಉಳಿಸಲು ರಾಜ್ಯ ಸರ್ಕಾರ ಮುಂದಾಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.