ಧಾರವಾಡ :ಶಾಲಾ ಶಿಕ್ಷಣ ಇಲಾಖೆ ವತಿಯಿಂದ 2023-24ನೇ ಸಾಲಿನ ರಾಜ್ಯ ಮಟ್ಟದ ಜಿಮ್ನಾಸ್ಟಿಕ್ ಪಂದ್ಯಾವಳಿಯನ್ನು ನವೆಂಬರ್ 06 ಮತ್ತು 07 ರಂದು ಧಾರವಾಡ ಕೋಟೆಯ ಶ್ರೀ ಬಾಲಮಾರುತಿ ಸಂಸ್ಥೆ ಹಾರಾಡಿ ರಾಮಣ್ಣ ಶೆಟ್ಟಿ ಜಿಮ್ನಾಸ್ಟಿಕ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗೀತಾ ಸಿ.ಡಿ ತಿಳಿಸಿದ್ದಾರೆ. ಅವರು ಇಂದು(ನ.02) ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜ್ಯ ಮಟ್ಟದ ಜಿಮ್ನಾಸ್ಟಿಕ್ ಪಂದ್ಯಾವಳಿಯ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.
ಕ್ರೀಡಾಕೂಟದಲ್ಲಿ ಧಾರವಾಡ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ತುಮಕೂರು, ಮೈಸೂರು, ಕೊಡಗು, ಹಾಸನ ಬೆಳಗಾವಿ, ಬಾಗಲಕೋಟ ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಿಂದ 175 ಬಾಲಕ-ಬಾಲಕಿಯರು ಹಾಗೂ 23 ತೀರ್ಪುಗಾರರು ಭಾಗವಹಿಸಲಿದ್ದಾರೆ. ಅದಮ್ಯ ಚೇತನ ಹಾಗೂ ಇಸ್ಕಾನ್ ಸಂಸ್ಥೆಗಳು ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲ ಮಕ್ಕಳಿಗೆ ಊಟ, ತಿಂಡಿ ನೀಡಲಿವೆ. ಡಯಟ್ ಮತ್ತು ಮಲ್ಲಸಜ್ಜನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮುತ್ತು ಹಾಗೂ ಪದಾಧಿಕಾರಿಗಳು ಹಾಗೂ ಶ್ರೀ ಬಾಲಮಾರುತಿ ಸಂಸ್ಥೆಯ ನಿರ್ದೇಶಕ ವಿಠ್ಠಲ ಮೂರ್ತಗುಡ್ಡೆ ಮತ್ತಿತರರು ಭಾಗವಹಿಸಿ ಮಾತನಾಡಿದರು.