ಬೆಂಗಳೂರು : ಬೈಕ್ ಅಪಘಾತದಲ್ಲಿ ತಲೆಗೆ ಪೆಟ್ಟುಬಿದ್ದು, ಮೆದುಳು ನಿಷ್ಕ್ರಿಯವಾಗಿದ್ದ ಚಿಕ್ಕ ಮಂಡ್ಯ ಗ್ರಾಮದ ದರ್ಶನ್ ಎಂಬ ಯುವಕನ ಅಂಗಾಂಗಗಳನ್ನು ಕುಟುಂಬದವರು ದಾನ ಮಾಡುವ ಮೂಲಕ 6 ಜನರ ಬಾಳಿಗೆ ಬೆಳಕಾಗಿದ್ದಾರೆ.
ಫೆಬ್ರವರಿ 22 ರಂದು ದರ್ಶನ್ ಬೈಕ್ ಅಪಘಾತಕ್ಕೀಡಾಗಿ ತಲೆಗೆ ತೀವ್ರ ಪೆಟ್ಟಾಗಿತ್ತು. ಆತುರದಲ್ಲಿ ಮನೆಗೆ ಬಂದು ರಾತ್ರಿ ಮಲಗಿದ್ದ. ಆದರೆ, ಆತನ ತಲೆಗೆ ತೀವ್ರ ಪೆಟ್ಟಾಗಿರುವುನ್ನು ಕಂಡ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ವೇಳೆ ತಲೆಯೊಳಗೆ ರಕ್ತಸ್ರಾವವಾಗಿರುವುದು ಪತ್ತೆಯಾಯಿತು.
ಕೂಡಲೇ ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‌ಗೆ ಕರೆದುಕೊಂಡು ಬರಲಾಯಿತು. ಹಲವಾರು ಪರೀಕ್ಷೆಗಳಿಗೆ ಒಳಪಡಿಸಿದರೂ ಆತ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಎರಡು ದಿನಗಳ ನಂತರ ಪರೀಕ್ಷೆ ನಡೆಸಿದ ವೈದ್ಯರ ತಂಡ ‘ಬ್ರೇನ್ ಡೆಡ್’ ಎಂದು ಘೋಷಿಸಿತು. ನಂತರ ‘ ಜೀವ ಸಾರ್ಥಕತೆ ’ ತಂಡ, ಕುಟುಂಬ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದ ನಂತರ, ಅಂಗಾಂಗ ದಾನ ಮಾಡಲು ಸಮ್ಮತಿಸಿ ಸಾರ್ಥಕತೆ ಮೆರೆದರು. ಅವರ ಯಕೃತ್ತು, ಎರಡು ಮೂತ್ರಪಿಂಡಗಳು, ಹೃದಯ ಕವಾಟಗಳು ಮತ್ತು ಇತರ ಅಂಗಾಂಶಗಳನ್ನು ಹೊರತೆಗೆದು ವೈಟಿಂಗ್ ಲಿಸ್ಟ್ ನಲ್ಲಿದ್ದ ರೋಗಿಗಳಿಗೆ ಕಸಿ ಮಾಡಲಾಯಿತು.
ಅಂಗಾಂಗ ಕಸಿಯನ್ನು ಸರ್ಕಾರಿ ಸೌಲಭ್ಯಗಳಲ್ಲಿ ನಡೆಸಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ, ಇದು ಅಂಗಾಂಗ ಮರುಪಡೆಯುವಿಕೆ ಮತ್ತು ಹಂಚಿಕೆಯಲ್ಲಿ ಸಾರ್ವಜನಿಕ ಆಸ್ಪತ್ರೆಗಳ ಹೆಚ್ಚುತ್ತಿರುವ ಪಾತ್ರವನ್ನು ಒತ್ತಿಹೇಳುತ್ತದೆ.



