ಚಾಮರಾಜನಗರ: ರಾಜ್ಯ ಹುಲಿ ಯೋಜನೆ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ. ರಮೇಶ್ ಕುಮಾರ್ ಅರು ೨೦೨೪ನೇ ಸಾಲಿನ ‘ಎಕೊ ವಾರಿಯರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅರಣ್ಯ ರಕ್ಷಣೆ, ವನ್ಯಜೀವಿ ಸಂರಕ್ಷಣೆ, ವನ್ಯಜೀವಿ ರಕ್ಷಣೆ, ತಂತ್ರಜ್ಞಾನದ ಬಳಕೆ, ಸಮುದಾಯ ಸಂಪರ್ಕ ಎಂಬ ೫ ಮಾನದಂಡಗಳ ಅಡಿಯಲ್ಲಿ ಭಾರತೀಯ ಅರಣ್ಯ ಸೇವೆ ಅಧಿಕಾರಿಗಳಿಗೆ ನೀಡುವ ಪ್ರಶಸ್ತಿ ಇದಾಗಿದ್ದು, ‘ವನ್ಯಜೀವಿ ಸಂಕ್ಷರಣೆ’ ವಿಭಾಗದಲ್ಲಿ ರಮೇಶ್ ಕುಮಾರ್ ಆಯ್ಕೆಯಾಗಿದ್ದರು. ಈಚೆಗೆ ದೆಹಲಿಯ ಜ್ಞಾನಪಥ ರಸ್ತೆಯಲ್ಲಿರುವ ಡಾ. ಬಿಆರ್ ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ಅರಣ್ಯ ಮಹಾನಿರ್ದೇಶಕರು ಮತ್ತು ಕಾರ್ಯದರ್ಶಿ ಜಿತೇಂದ್ರ ಕುಮಾರ್ ಪ್ರಶಸ್ತಿ ಪ್ರಧಾನ ಮಾಡಿದರು.
ಬಂಡೀಪುರ, ನಾಗರಹೊಳೆ, ಕುದುರೆಮುಖ, ಕಾವೇರಿ ವನ್ಯಜೀವಿಧಾಮ, ಬಳ್ಳಾರಿ ಅರಣ್ಯ ವಿಭಾಗದಲ್ಲಿ ಅರಣ್ಯಾಧಿಕಾರಿಯಾಗಿದ್ದ ಡಾ.ಪಿ.ರಮೇಶ್‌ಕುಮಾರ್ ಈ ಹಿಂದೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹುಲಿ ಯೋಜನೆ ನಿರ್ದೇಶಕರಾಗಿದ್ದರು. ಆಗ ಆನೆ, ಹುಲಿ ಸೇರಿದಂತೆ ಇನ್ನಿತರ ವನ್ಯಜೀವಿಗಳ ರಕ್ಷಣೆಗೆ ಡಾ.ಪಿ. ರಮೇಶ್‌ಕುಮಾರ್ ತಂಡ ಶ್ರಮಿಸಿತ್ತು. ಬಂಡೀಪುರದಲ್ಲಿ ಬಂಡೀಪುರ ಯುವಮಿತ್ರ ಕಾರ್ಯಕ್ರಮವನ್ನು ನೂತನವಾಗಿ ಅನುಷ್ಠಾನಗೊಳಿಸಿ ಆಮೂಲಕ ಜಿಲ್ಲೆಯ ಶಾಲಾ ಮಕ್ಕಳಿಗೆ ಹಾಗೂ ರೈತರಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸೊಬಗನ್ನು ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಜೊತೆಗೆ ಇವರ ಅವಧಿಯಲ್ಲಿ ಕಳೆಗಿಡವಾದ ಲಂಟನಾದಿಂದ ಕರಕುಶಲಗಳ ವಸ್ತುಗಳ ತಯಾರಿಕೆ ಸೇರಿದಂತೆ ಕಾಡಿಗೆ ಬೆಂಕಿ ಬೀಳುವುದನ್ನು ತಡೆಗಟ್ಟುವಲ್ಲಿ ಇವರು ವಹಿಸಿದ್ದ ಪಾತ್ರ ಅಮೋಘವಾಗಿತ್ತು, ಪ್ರಸ್ತುತ ರಾಜ್ಯ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಇವರ ವ್ಯಾಪ್ತಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಅನಶಿ-ದಾಂಡೇಲಿ, ಕಾಳಿ ಹುಲಿ ಸಂರಕ್ಷಿತ ಪ್ರದೇಶಗಳು ಇವರ ವ್ಯಾಪ್ತಿಗೆ ಬರುತ್ತದೆ. ಇವರು ಬಂಡೀಪುರದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿರವರು ಬಂಡೀಪುರಕ್ಕೆ ಭೇಟಿ ನೀಡಿ ಅಲ್ಲಿನ ಅರಣ್ಯ ಹಾಗೂ ವನ್ಯಜೀವಿ ಸೊಬಗನ್ನು ಕಣ್ತುಂಬಿಕೊಂಡು ಡಾ.ಪಿ.ರಮೇಶ್‌ಕುಮಾರ್‌ರವರನ್ನು ಶ್ಲಾಘಿಸಿದ್ದರು.
ಜೊತೆಗೆ ಅಂತರಾಜ್ಯ ಹುಲಿ ಸಂರಕ್ಷಣೆ ಕುರಿತು ಬಂಡೀಪುರದಲ್ಲಿ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ರವರ ಅಧ್ಯಕ್ಷತೆಯಲ್ಲಿ ಬಂಡೀಪುರದಲ್ಲಿ ಕಾರ್ಯಕ್ರಮ ಕೈಗೊಂಡು ಹುಲಿ ಸಂರಕ್ಷಣೆಗೆ ಬೇಕಾದ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದನ್ನು ಸ್ಮರಿಸಬಹುದು.
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ದೊಡ್ಡ ಬೆಕ್ಕುಗಳ ಒಕ್ಕೂಟದ (ಐಬಿಸಿಎ) ಪ್ರಧಾನ ನಿರ್ದೇಶಕ ಎಸ್‌ಪಿ.ಯಾದವ್, ಸುಪ್ರೀಂ ಕೋರ್ಟ್ ಉನ್ನತ ಸಮಿತಿ ಸದಸ್ಯ ಸಿ.ಪಿ. ಗೋಯಲ್, ಐಎಫ್‌ಎಸ್ ಅಸೋಸಿಯೇಷನ್ ಅಧ್ಯಕ್ಷರಾದ ಅಶ್ವತಿ, ನಟ ರಣದೀಫ್ ಹೂಡಾ ಪಾಲ್ಗೊಂಡಿದ್ದರು.