Friday, April 11, 2025
Google search engine

Homeರಾಜಕೀಯಜೂನ್ ತಿಂಗಳಲ್ಲಿ ಸರ್ಕಾರ 10 ಕೆಜಿ ಪಡಿತರ ಒದಗಿಸದಿದ್ದರೆ ರಾಜ್ಯವ್ಯಾಪಿ ಹೋರಾಟ: ಬೊಮ್ಮಾಯಿ ಎಚ್ಚರಿಕೆ

ಜೂನ್ ತಿಂಗಳಲ್ಲಿ ಸರ್ಕಾರ 10 ಕೆಜಿ ಪಡಿತರ ಒದಗಿಸದಿದ್ದರೆ ರಾಜ್ಯವ್ಯಾಪಿ ಹೋರಾಟ: ಬೊಮ್ಮಾಯಿ ಎಚ್ಚರಿಕೆ

ಬೆಂಗಳೂರು: ಬಡವರ ಮೇಲೆ ಸಿದ್ದರಾಮಯ್ಯನವರಿಗೆ ಮೇಲೆ ಸ್ವಲ್ಪವೂ ಕಾಳಜಿ ಇಲ್ಲ. ಬಡವರಿಗೆ ಆಸೆ-ಆಮೀಷಗಳನ್ನು ಒಡ್ಡಿ, ಈಗ ಅಧಿಕಾರಕ್ಕೆ ಬಂದ ನಂತರ, ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಾದಾಗ ಬೇರೆಯವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಅನ್ನಭಾಗ್ಯ ಯೋಜನೆ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಭುಗಿಲೆದ್ದಿರುವ ವಿವಾದದ ಬೆನ್ನಲ್ಲೇ ಬೊಮ್ಮಾಯಿ ಅವರು ಈ ಟೀಕೆಗಳನ್ನು ಮಾಡಿದ್ದಾರೆ.

ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಅವರು, ‘ಮಾತೆತ್ತಿದರೇ 13 ಬಜೆಟ್ ಮಂಡಿಸಿದ್ದೇನೆ ಎಂದು ಬೀಗುವ ಸ್ವಯಂಘೋಷಿತ ಆರ್ಥಿಕ ತಜ್ಞರಿಗೆ, ಗ್ಯಾರಂಟಿಗಳನ್ನು ಈಡೇರಿಸಲು ಸಂಪನ್ಮೂಲವನ್ನು ಹೇಗೆ ಕ್ರೋಢೀಕರಣಗೊಳಿಸುವುದು ಎಂಬ ಸಣ್ಣ ಅಂಶ ಗಮನಕ್ಕೆ ಬಂದಿರಲಿಲ್ಲವೇ?’ ಎಂದೂ ಪ್ರಶ್ನಿಸಿದ್ದಾರೆ.

‘ಕೇಂದ್ರ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ, ಯಾವುದೇ ಇತರ ಖರ್ಚುಗಳನ್ನು ರಾಜ್ಯ ಸರ್ಕಾರಗಳ ಮೇಲೆ ಹೊರಿಸದೇ, 5 ಕೆಜಿ ಅಕ್ಕಿಯನ್ನು ನೀಡುತ್ತಿದೆ. ಡಿಸೆಂಬರ್‌ನಿಂದ, ಗರೀಬ್ ಕಲ್ಯಾಣ್ ಯೋಜನೆಯಡಿ ಕೇಂದ್ರ ಸರ್ಕಾರವು 10 ಕೆಜಿ ಅಕ್ಕಿಯನ್ನು ನೀಡುತ್ತಿದೆ’ ಎಂದು ಅವರು ಹೇಳಿದ್ದಾರೆ. ‘ರಾಜ್ಯ ಸರ್ಕಾರದ ಬೊಕ್ಕಸದಿಂದ ಹಣ ಹೊಂದಿಸಿ, 1 ಕೆಜಿ ಅಕ್ಕಿಯನ್ನು ಖರೀದಿಸುವ ವೇಳೆಯಲ್ಲಿ ಸಹ, FCI ನಮಗೆ ಈ ಬಗ್ಗೆ ನಿಭಂದನೆ ಇದೆ ಎಂದು ತಿಳಿಸಿತ್ತು. ಆನಂತರ ಈ ಬಗ್ಗೆ ಕಡತದಲ್ಲಿ ನಾನು ಸವಿವರವಾಗಿ ನಮೂದಿಸಿದ್ದು, ಏಪ್ರಿಲ್,ಮೇ, ಜೂನ್, ಜುಲೈಗೆ ಹೆಚ್ಚುವರಿ ಅಕ್ಕಿಯನ್ನು ಟೆಂಡರ್ ಮುಖಾಂತರ ಬೇರೆ ಆಹಾರ ನಿಗಮಗಳಿಂದಾದರೂ ಸಹ ಖರೀದಿಸಬೇಕು, ಕೇವಲ FCI ಮೇಲೆ ಅವಲಂಬಿತರಾಗಬಾರದು ಎಂದು ಸ್ಪಷ್ಟವಾಗಿ ಅಧಿಕಾರಿಗಳಿಗೆ ತಿಳಿಸಿದ್ದೆ’ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

‘ಹೊಸ ಸರ್ಕಾರ ರಚನೆಯಾದ ಮೊದಲ ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯನವರು 5 ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಿ, ಅಧಿಕಾರಿಗಳೊಂದಿಗೆ ಅನೇಕ ಸರಣಿ ಸಭೆ ನಡೆಸಿದರು. ಅಂದೇ ಅಧಿಕಾರಿಗಳಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ತಿಳಿಹೇಳಬಹುದಿತ್ತಲ್ವಾ…?’ ಎಂದು ಪ್ರಶ್ನಿಸಿದ್ದಾರೆ. ಕೊನೆ ಪಕ್ಷ ಟೆಂಡರ್ ಸಹ ಕರೆಯಲಿಲ್ಲ, ಕೇಂದ್ರ ಸರ್ಕಾರದೊಂದಿಗೆ ಸಂಪರ್ಕ ಸಹ ನಡೆಸದೇ, ಕೇವಲ FCI ನೊಂದಿಗೆ ಸಂವಹನ ನಡೆಸಿರುವುದನ್ನು ಗಮನಿಸಿದರೇ, ಈ ಸರ್ಕಾರಕ್ಕೆ ನುಡಿದಂತೆ ನಡೆಯಲು, ಜನರಿಗೆ ಅಕ್ಕಿ ಕೊಡಲು ಇಷ್ಟವಿಲ್ಲ ಎಂಬುದು ಸಾಬೀತಾಗುತ್ತದೆ.

ಅಕ್ಕಿ ಕೊಡುವ ದಿನ ಹತ್ತಿರ ಬಂದ ಕಾರಣ, ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ, ತಮ್ಮ ತಪ್ಪನ್ನು ಸಾರ್ವಜನಿಕರೆದುರು ಮರೆಮಾಚಲು ಯತ್ನಿಸುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ. ಈ ಕೂಡಲೇ ವಿವಿಧ ಆಹಾರ ನಿಗಮಗಳನ್ನು ಸಂಪರ್ಕಿಸಿ ಮಾತು ತಪ್ಪದಂತೆ, ಸಾರ್ವಜನಿಕರಿಗೆ 10ಕೆಜಿ ಅಕ್ಕಿಯನ್ನು ನೀಡಬೇಕು ಎಂದು ಆಗ್ರಹಿಸುತ್ತೇನೆ. ಒಂದು ವೇಳೆ ಆಗದಿದ್ದರೇ, ಎಲ್ಲಾ ಕುಟುಂಬಗಳಿಗೆ ಡಿಬಿಟಿ ಮೂಲಕ 10ಕೆಜಿ ಅಕ್ಕಿಯ ಬದಲು ಹಣವನ್ನು ನೀಡಬೇಕು. ನಮ್ಮ ಬಳಿ ಡಿಬಿಟಿ ಮೂಲಕ ಹಣ ಪಾವತಿಸಲು ಎಲ್ಲಾ ಅಗತ್ಯ ದತ್ತಾಂಶಗಳು ಸಹ ಇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.

‘ಜೂನ್ ತಿಂಗಳಲ್ಲಿ ಸರ್ಕಾರ 10 ಕೆಜಿ ಪಡಿತರವನ್ನು ಒದಗಿಸದೇ ಇದ್ದಲ್ಲಿ, ನಾವು ರಾಜ್ಯ ವ್ಯಾಪಿ ಹೋರಾಟವನ್ನು ನಡೆಸುತ್ತೇವೆ. ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು, ಈಗ ಭರವಸೆಗಳನ್ನು ಈಡೇರಿಸಲು ಆಗದೇ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುವ ಈ ಸರ್ಕಾರಕ್ಕೆ ಕೆಲವೇ ದಿನಗಳಲ್ಲಿ ಜನತೆ ಹಿಡಿಶಾಪ ಹಾಕಲಿದ್ದಾರೆ’ ಎಂದು ಎಚ್ಚರಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular