ಮಂಗಳೂರು (ದಕ್ಷಿಣ ಕನ್ನಡ): ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಪುತ್ರನಿಂದ ಗರ್ಭಿಣಿಯಾಗಿ ಮಗುವಿಗೆ ಜನ್ಮವಿತ್ತ ಸಂತ್ರಸ್ತ ಯುವತಿಯ ಮನೆಗೆ ರಾಜ್ಯ ಮಹಿಳಾ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಭೇಟಿ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ರು. ನಿಮ್ಮ ಜೊತೆ ನಾನಿದ್ದೇನೆ, ಧೈರ್ಯ ಕಳೆದುಕೊಳ್ಳಬೇಡಿ. ಯಾವುದೇ ಕಾರಣಕ್ಕೂ ಮಾಸ್ಕ್ ಧರಿಸಿಕೊಂಡು ಜೀವನ ಮಾಡಬೇಡಿ. ಅಂತಹ ದೊಡ್ಡ ತಪ್ಪು ನೀವೇನೂ ಮಾಡಿಲ್ಲ. ಇವತ್ತಿಂದ ಮಾಸ್ಕ್ ತೆಗೆದು ಧೈರ್ಯದಿಂದ ಇರಬೇಕು. ಸಂತ್ರಸ್ತೆಯ ತಾಯಿಯ ಮುಖಕ್ಕೆ ಹಾಕಿದ್ದ ಮಾಸ್ಕ್ ನ್ನು ಪ್ರತಿಭಾ ಕುಳಾಯಿ ತೆಗೆಸಿದ್ರು.

‘ಇಂತಹ ಘಟನೆಗಳು ನಡೆದಾಗ ಯಾವುದೇ ಕಾರಣಕ್ಕೂ ಮಹಿಳೆಯಾದವಳು ಧೈರ್ಯ ಕಳೆದುಕೊಳ್ಳಬಾರದು. ಬದಲಾಗಿ ಇಂತಹವರ ವಿರುದ್ಧ ಹೋರಾಟ ಮಾಡಬೇಕು. ಇದು ಇಬ್ಬರ ಭವಿಷ್ಯದ ಪ್ರಶ್ನೆ. ನಾನು ನಿಮ್ಮ ಪರವಾಗಿ ಇದ್ದೇನೆ. ಸಂತ್ರಸ್ತೆ ಗಂಡನ ಮನೆಗೆ ಸೇರಿಸುವ ಜವಾಬ್ದಾರಿ ನನ್ನದು. ಇಲ್ಲಿಯವರೆಗೆ ಸಂತ್ರಸ್ತೆಗೆ ಒಬ್ಬರು ತಾಯಿ ಇದ್ದರು, ಇನ್ಮೇಲೆ ನಾನು ಕೂಡ ತಾಯಿ. ಸಂತ್ರಸ್ತೆ ಕುಟುಂಬದ ಖರ್ಚು ವೆಚ್ಚವನ್ನೆಲ್ಲ ನಾನು ಭರಿಸುತ್ತೇನೆ ಎಂದ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಜೊತೆ ಮಾತುಕತೆ ಮಾಡುತ್ತೇನೆ. ಸಂತ್ರಸ್ತೆ ಕುಟುಂಬದ ಜೊತೆ ನಿಂತು ನ್ಯಾಯ ಒದಗಿಸುವ ಕೆಲಸ ನನ್ನದು. ಆರೋಪಿ ಕೃಷ್ಣ ಕೆ ರಾವ್ ಪ್ರೌಢಾವಸ್ಥೆಗೆ ಬಂದಿಲ್ಲ ಅಂತ ಕೆಲವರು ಹೇಳ್ತಾರೆ. ಮಗು ಮಾಡಲು ಗೊತ್ತಿದೆ, ಇನ್ನೆಂಥ ಪ್ರೌಢಾವಸ್ಥೆ ಎಂದು ಪುತ್ತೂರಿನಲ್ಲಿ ಹಿಂದುಳಿದ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಕಿಡಿಕಾರಿದ್ರು.