ಮೈಸೂರು: ಸನಾತನ ಧರ್ಮ, ಹಿಂದೂ ಧರ್ಮ ಒಂದೇ, ಎಲ್ಲಾ ಧರ್ಮಗಳಲ್ಲೂ ತಾರತಮ್ಯ ಇದ್ದೇ ಇದೆ. ಹಾಗಂತ ಸನಾತನ ಧರ್ಮದ ವಿರುದ್ಧ ಮಾತನಾಡುವುದು ಖಂಡನೀಯ ಎಂದು ನಿವೃತ್ತ ಎಡಿಜಿಪಿ ಹಾಗೂ ಬಿಜೆಪಿ ಮುಖಂಡ ಭಾಸ್ಕರ್ ರಾವ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸನಾತನ ಧರ್ಮದ ಬಗ್ಗೆ ಮಾತನಾಡಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಮನೆಯೊಳಗೆ ಸನಾತನ ಧರ್ಮದ ಆಚರಣೆಗಳು ನಡೆಯುತ್ತಿತ್ತು ಎಂದು ಹೇಳಿದರು.
ಸನಾತನ ಧರ್ಮದಲ್ಲಿ ಸಮಾನತೆ ಇಲ್ಲ ಎಂದರೆ ಯಾವ ಧರ್ಮದಲ್ಲಿ ಸಮಾನತೆ ಇದೆ. ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ ಧರ್ಮಗಳಲ್ಲೂ ತಾರತಮ್ಯ ಇಲ್ಲವೇ ಸನಾತನ ಧರ್ಮ ಈ ದೇಶದ ಶೇ೮೦ ರಷ್ಟು ಜನರ ಧರ್ಮ ಅದನ್ನು ಬಲಪಡಿಸುವ ಕೆಲಸವನ್ನು ಬ್ರಾಹ್ಮಣೇತರರು ಮಾಡಬೇಕಿದೆ ಎಂದು ಹೇಳಿದರು.
ವಿಪ್ರ ಸಮುದಾಯವನ್ನು ಗುರಿಯಾಗಿಸಿಕೊಂಡು ಹಿಂದಿನಿಂದಲೂ ಟಾರ್ಗೆಟ್ ಮಾಡಲಾಗುತ್ತಿದೆ. ನಮ್ಮಲ್ಲಿ ಬಹುಬಲ ಇಲ್ಲದ ಕಾರಣ ಏನೂ ಮಾಡಲು ಆಗುತ್ತಿಲ್ಲ. ಆದರೆ ಬುದ್ಧಿ ಬಲದ ಮೇಲೆ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.