ರಾಮನಗರ:
ಇತ್ತೀಚೆಗೆ ಅತಿ ಹೆಚ್ಚು ಹಲವಾರು ದುಶ್ಚಟಗಳು ಮನುಷ್ಯನನ್ನು ಆವರಸಿಕೊಂಡಿವೆ. ಇದರಿಂದಾಗಿ ನೂರಾರು ಖಾಯಿಲೆಗಳು ದೇಹ ಹೊಕ್ಕು ನಿತ್ಯ ಸಾವು ನೋವುಗಳು ಸಂಭವಿಸುತ್ತಿವೆ. ಆದ್ದರಿಂದ ನಾವು ದುಶ್ಚಟಗಳಿಂದ ದೂರವಿರಬೇಕು ಎಂದು ಆಡಳಿತ ವೈದ್ಯಾಧಿಕಾರಿ ಕೆ.ವಿ ಪ್ರತಿಮಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಜಿಲ್ಲಾ ಪಂಚಾಯತ್ ಮತ್ತು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ, ಬೆಳಗುಂಬ ಗ್ರಾಮ ಪಂಚಾಯ್ತಿ ಹಾಗೂ ತಗ್ಗಿಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಕಾರದೊಂದಿಗೆ ಬೆಳಗುಂಬ ಗ್ರಾಮದಲ್ಲಿ ಆರೋಗ್ಯ ಅಮೃತ ಅಭಿಯಾನದಡಿ ನರೇಗಾ ಕೂಲಿ ಕಾರ್ಮಿಕರು ಮತ್ತು ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ, ಆಡಳಿತ ವೈದ್ಯಾಧಿಕಾರಿ ಪ್ರತಿಮಾ ಕೆ.ವಿ ಯಾವುದೇ ವ್ಯಕ್ತಿಗೆ ಆರೋಗ್ಯ ಸ್ಥಿತಿ ಎಂಬುದು ಆತನ ಬೆಳವಣಿಗೆಯಲ್ಲಿ ತೋರಿಸುತ್ತದೆ. ಇತ್ತೀಚೆಗೆ ಹಲವಾರು ದುಶ್ಚಟಗಳು ಮನುಷ್ಯನನ್ನು ಆವರಿಸಿಕೊಂಡಿದ್ದು, ಮಧುಮೇಹ, ರಕ್ತದೊತ್ತಡ, ಕ್ಷಯ, ರಕ್ತಹೀನತೆ, ಕ್ಯಾನ್ಸರ್, ಅಲ್ಸರ್‌ಗಳಂತ ರೋಗಗಳಿಗೆ ತುತ್ತಾಗಿ ಮಾನಸಿಕವಾಗಿ ಕುಗ್ಗುತ್ತಾ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ರೋಗಗಳಿಂದ ತಾನು ಹಾಗೂ ತನ್ನ ಕುಟುಂಬವನ್ನು ದೂರವಿಡಲು, ಅಸಮರ್ಪಕ ಆಹಾರ ಸೇವನೆ, ದೇಹಕ್ಷಮತೆ ಅಗತ್ಯ. ಸಮಯಕ್ಕೆ ಅನುಗುಣವಾಗಿ ಆರೋಗ್ಯ ತಪಾಸಣೆ, ಉತ್ತಮ ಜೀವನ ಶೈಲಿಯನ್ನು ಅನುಸರಿಸಬೇಕು ಎಂದು ಕೂಲಿಕಾರರಿಗೆ ಅರಿವು ಮೂಡಿಸಿದರು.
ಜೊತೆಗೆ ತಾಯಂದಿರು ಸಹಾ ತನ್ನ ಮಗುವಿನ ಬೆಳವಣಿಗೆಗೆ ಕುಂಠಿತವಾಗುವAತಹ ಆಹಾರ ಪದ್ಧತಿ, ಅವೈಜ್ಞಾನಿಕ ಪದ್ದತಿಗಳ ಅನುಸರಣೆಯಿಂದ ದೂರವಿರಬೇಕು ಹಾಗೂ ಇಂತಹ ಆರೋಗ್ಯ ಶಿಬಿರಗಳಲ್ಲಿ ಭಾಗಿಯಾಗಿ ತಪಾಸಣೆಮಾಡಿಸಿಕೊಳ್ಳುವುದರ ಮೂಲಕ ತಮ್ಮ ಆರೋಗ್ಯದ ಮೂಲಸ್ಥಿತಿಯನ್ನು ಅರಿತು ಸಮಸ್ಯೆಗನುಗುಣವಾಗಿ ಚಿಕಿತ್ಸೆಯನ್ನು ಪಡೆಯಬೇಕು. ಆರೋಗ್ಯ ಶಿಬಿರಗಳ ಅನುಕೂಲವನ್ನು ನೆರೆಮನೆಯವರಿಗೂ ತಿಳಿಸಿ ಅರಿವು ಮೂಡಿಸಬೇಕು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.
ಅರೋಗ್ಯ ಸುರಕ್ಷತಾಧಿಕಾರಿ ಅನ್ನಪೂರ್ಣ ಮಾತನಾಡಿ, ಗ್ರಾಮದ 30 ವರ್ಷ ಮೇಲ್ಪಟ್ಟ ಎಲ್ಲರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ರೋಗಗಳು ವಯಸ್ಸಿನ ಮಾಪನದಿಂದ ಹರಡುವುದಿಲ್ಲ. ಬದಲಾಗಿ ನಾವು ಅವಳವಡಿಸಿಕೊಂಡ ಆರೋಗ್ಯ ಕ್ರಮಗಳು ಹಾಗೂ ವೈಜ್ಞಾನಿಕ ಅರಿವಿನಿಂದ ನಿರ್ಧರಿತವಾಗುತ್ತದೆ. ಹಳ್ಳಿಯ ಭಾಗದ ಜನರಲ್ಲಿ ಹೆಚ್ಚಾಗಿ ತಂಬಾಕು ಸೇವನೆ ದುರಾಭ್ಯಾಸಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಮುಂದಿನ ದಿನಗಳಲ್ಲಿ ಮಾರಕ ರೋಗಗಳಿಗೆ ಆಹ್ವಾನವಿತ್ತಂತೆ. ಇಂತಹ ಅಭ್ಯಾಸಗಳನ್ನು ದೂರವಿಡುವುದರಿಂದ ತಮ್ಮ ಜೀವಿತಾವಧಿಗೆ ಕೊಡುಗೆ ನೀಡಿದಂತಾಗುತ್ತದೆ. ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕು ಎಂದು ಹೇಳಿದರು.
ಹಂಚಿಕುಪ್ಪೆ ಗ್ರಾ.ಪಂ.ನಲ್ಲಿ ಆರೋಗ್ಯ ಶಿಬಿರ: ಹಂಚಿಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾರೇಗೌಡನದೊಡ್ಡಿಯಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ನೇತ್ರಾರವರು ನಮ್ಮ ದೈನಂದಿನ ಚಟುವಟಿಕೆಗಳ ಜೊತೆಗೆ ಪೌಷ್ಠಿಕಾಂಶ ಆಹಾರ ಸೇವನೆ, ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ, ತಂಬಾಕು ಸೇವನೆಗಳಂತಹ ದುಶ್ಛಟಗಳಿಂದ ದೂರವಿರಬೇಕು ಎಂದು ಹೇಳಿದರು. ಶಿಬಿರದಲ್ಲಿ ನರೇಗಾ ಕೂಲಿಕಾರರು, ಹಿರಿಯ ನಾಗರಿಕರು, ಬಾಣಂತಿಯರು, ಮಕ್ಕಳಿಗೆ ತಪಾಸಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುರೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಧನಂಜಯ್ ಕುಮಾರ್, ಹಂಚಿಕುಪ್ಪೆ ಪಿಡಿಓ ಅಂಜನ್ ಕುಮಾರ್, ಗ್ರಾಪಂ.ಅಧ್ಯಕ್ಷರಾದ ಜಯಣ್ಣ, ಸದಸ್ಯರಾದ ನರಸಿಂಹಯ್ಯ, ತಾಲ್ಲೂಕು ಸಂಯೋಯಕ ಉಮೇಶ್, ತಾಲ್ಲೂಕು ಐಇಸಿ ಸಂಯೋಜಕ ರವಿ ಅತ್ನಿ, ಸದಸ್ಯರಾದ ಕೋಟಪ್ಪ, ರಾಧಿಕ ರಾಜಣ್ಣ, ಸಮುದಾಯ ಆರೋಗ್ಯಾಧಿಕಾರಿ ಚೈತನ್ಯ, ಆರೋಗ್ಯ ನಿರೀಕ್ಷಣಾಧಿಕಾರಿ ರಾಘವೇಂದ್ರ ಪಿ. ಸುರಕ್ಷತಾಧಿಕಾರಿ ಅನ್ನಪೂರ್ಣ, ಜಯಲಕ್ಷ್ಮಮ್ಮ, ಗಣಕಯಂತ್ರ ನಿರ್ವಾಹಕಿ ತೇಜಶ್ರೀ, ಗ್ರಾಮ ಕಾಯಕ ಮಿತ್ರ ಶಶಿಕಲಾರವರು ಸೇರಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.