Friday, February 27, 2026
Google search engine

Homeರಾಜ್ಯಸುದ್ದಿಜಾಲ25000 ಫಲಾನುಭವಿಗಳಿಗೆ ಕಂದಾಯ ಸವಲತ್ತು ವಿತರಿಸಲು ಕ್ರಮ : ಜಿಲ್ಲಾಧಿಕಾರಿ ಜಿ.ಪ್ರಭು

25000 ಫಲಾನುಭವಿಗಳಿಗೆ ಕಂದಾಯ ಸವಲತ್ತು ವಿತರಿಸಲು ಕ್ರಮ : ಜಿಲ್ಲಾಧಿಕಾರಿ ಜಿ.ಪ್ರಭು

ಚಿಕ್ಕಬಳ್ಳಾಪುರ : ಇಂದು ನಡೆಯಲಿರುವ ಕಂದಾಯ ಸೇವೆಗಳ ಗ್ಯಾರಂಟಿ ಸಮರ್ಪಣಾ ಸಮಾವೇಶಕ್ಕೆ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.

ಈ ಕುರಿತು ನಗರದ ಹೊರವಲಯ ಚೊಕ್ಕಹಳ್ಳಿ ಬಳಿ “ಕಂದಾಯ ಸೇವೆಗಳ ಗ್ಯಾರಂಟಿ ಸಮರ್ಪಣಾ ಸಮಾವೇಶದ” ವೇದಿಕೆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಪೂರ್ವಸಿದ್ದತೆಗಳನ್ನು ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಫೌತಿ ಖಾತೆ, ದರಖಾಸ್ತು ಪೋಡಿ, ಮಾಸಾಶನ ಹಾಗೂ ಕಂದಾಯ ಗ್ರಾಮದ ಹಕ್ಕು ಪತ್ರಗಳ ವಿತರಣೆ ಸೇರಿದಂತೆ ಒಟ್ಟು 25000 ಫಲಾನುಭವಿಗಳಿಗೆ ಕಂದಾಯ ಸವಲತ್ತುಗಳನ್ನು ಜಿಲ್ಲಾ ಕೇಂದ್ರದಲ್ಲಿ ವಿತರಿಸಲು ಕ್ರಮವಹಿಸಲಾಗಿದೆ.

ಜಿಲ್ಲೆಯ 8 ತಾಲೂಕುಗಳಿಂದ 18 ರಿಂದ 20 ಸಾವಿರ ಫಲಾನುಭವಿಗಳು ಹಾಗೂ ಜಿಲ್ಲೆಯ ನಾಗರಿಕರು ಆಗಮಿಸುವ ನಿರೀಕ್ಷೆಯಿದ್ದು, ತಾಲೂಕುವಾರು ಬಸ್ ವ್ಯವಸ್ಥೆ ಸಹ ಮಾಡಿದ್ದು, ಅಲ್ಲಿಂದಲೇ ಅವರನ್ನು ಕರೆ ತಂದು ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ ವಾಪಸ್ಸು ಕರೆದುಕೊಂಡು ಹೋಗುವ ಅನುಕೂಲ ಮಾಡಲಾಗಿದೆ. ಶಿಷ್ಟಾಚಾರದ ರೀತಿಯಲ್ಲಿಯೇ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದರು.

ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರು ಈ ಸಮರ್ಪಣಾ ಸಮಾವೇಶದ ಕುರಿತು ಸಭೆಗಳನ್ನು ಮಾಡಿ ನಿರ್ದೇಶನ ನೀಡಿದ್ದಾರೆ. ಗುರುವಾರ ಸಂಜೆ ವೇದಿಕೆ ಸ್ಥಳಕ್ಕೆ ಸಚಿವರು ಭೇಟಿ ಕೊಟ್ಟು ಪರಿಶೀಲನೆ ನಡೆಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಂದಾಯ ಸಚಿವರ ಸಹಕಾರ ದಿಂದ ಚಿಕ್ಕಬಳ್ಳಾಪುರ ಜಿಲ್ಲೆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿ ಭೂತವಾಗುತ್ತಿದೆ. ಈ ರೀತಿಯ ಇನ್ನಷ್ಟು ಜನಸ್ನೇಹಿ ಕಾರ್ಯಗಳನ್ನು ಜಿಲ್ಲಾಡಳಿತ ಕೈಗೊಳ್ಳಲು  ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ನಾಗರಿಕರು ಆಗಮಿಸಿ ನಮಗೆ ಪ್ರೇರಣೆ ನೀಡಬೇಕು ಎಂದು ನಾಗರಿಕರಲ್ಲಿ ಮನವಿ ಮಾಡಿ ಆಹ್ವಾನ ನೀಡಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅತಿಕ್ ಪಾಷಾ, ವಿವಿಧ ಇಲಾಖೆಗಳ ಅಧಿಕಾರಿ ಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular