ನಂಜನಗೂಡು: ರಸ್ತೆಯೊಂದಕ್ಕೆ ಡಾ.ಅಂಬೇಡ್ಕರ್ ಫಲಕವನ್ನು ಅಳವಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದು, ಹಿಂಸಾರೂಪಕ್ಕೆ ತಿರುಗಿದ ಘಟನೆ ತಾಲ್ಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ೨೦ಕ್ಕೂ ಹೆಚ್ಚು ವಾಹನಗಳು ಜಖಂ ಗೊಂಡಿದ್ದು, ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದೆ.
ಗ್ರಾಮದ ರಸ್ತೆಗೆ ಅಂಬೇಡ್ಕರ್ ಫಲಕವನ್ನು ಅಳವಡಿಸಲು ಒಂದು ಗುಂಪು ಹೋದಾಗ ಇನ್ನೊಂದು ಗುಂಪಿನ ಜತೆ ಮಾತಿನ ಚಕಮಕಿ ನಡೆದು, ಏಕಾಏಕಿ ಕಲ್ಲು ತೂರಾಟ ನಡೆದಿದೆ. ನಂತರ ಒಂದು ಗುಂಪು ಮತ್ತೊಂದು ಗುಂಪಿನ ೨೦ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿ ಹಲ್ಲೆ ನಡೆಸಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದ್ದು, ಘಟನೆಯಲ್ಲಿ ಎಎಸ್‌ಐ ಗೋಪಾಲ್ ಸೇರಿದಂತೆ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಎಸ್‌ಪಿ ಸೀಮಾ ಲಾಟ್ಕರ್, ಎಎಸ್‌ಪಿ ನಂದಿನಿ, ಡಿವೈಎಸ್‌ಪಿ ಗೋವಿಂದರಾಜು ನೇತೃತ್ವದಲ್ಲಿ
೪ ಮೀಸಲು ಪಡೆ ಸಿಬ್ಬಂದಿ ಭೇಟಿ ನೀಡಿದ್ದು, ಬಂದೋಬಸ್ತ್ ಏರ್ಪಡಿಸಲಾಗಿದೆ.
ಹಿನ್ನೆಲೆ: ವಾರದ ಹಿಂದೆಯೇ ಗ್ರಾಮದಲ್ಲಿ ಇದೇ ವಿಚಾರ ವಿರಸಕ್ಕೆ ಕಾರಣವಾಗಿದ್ದು, ಸೋಮವಾರ ಸಂಜೆ ಗ್ರಾಮದ ಮುಖಂಡರ ನಡುವೆ ನಡೆದ ಸಂಧಾನ ಸಭೆ ಮುರಿದು ಬಿದ್ದು, ಹಿಂಸಾರೂಪಕ್ಕೆ ತಿರುಗಿದೆ.