ಮೈಸೂರು: ದೊಡ್ಡ ದೊಡ್ಡವರು ಸೇರಿಕೊಂಡು ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದಾರೆ. ಇನ್ನಾದರೂ ಹೊಂದಾಣಿಕೆ ರಾಜಕಾರಣ ಕೊನೆಯಾಗಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮುಡಾ ಹಗರಣ ಸಂಬಂಧ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಪೇಸಿಎಂ, 40% ಕಮಿಷನ್ ಸರ್ಕಾರ ಎಂದು ಹೇಳಿ ಬಿಜೆಪಿ ವಿರುದ್ಧ ನೂರು ಆರೋಪ ಮಾಡಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಂಡಿದೆ. ಒಂದು ಹಗರಣದ ಬಗ್ಗೆ ತನಿಖೆಯನ್ನು ಸಿದ್ದರಾಮಯ್ಯ ಮಾಡಿಸಿದ್ದಾರಾ? ಯಾವ ಹಗರಣದ ಬಗ್ಗೆಯೂ ಸಣ್ಣ ತನಿಖೆ ನಡೆದಿಲ್ಲ. ಕಾಂಗ್ರೆಸ್ ಕೂಡ ಬಿಜೆಪಿ ಮೇಲಿನ ಎಲ್ಲಾ ಹಗರಣಗಳ ಆರೋಪಗಳ ತನಿಖೆಗೆ ಆದೇಶ ಮಾಡಲಿ ಎಂದು ಆಗ್ರಹಿಸಿದರು.
ಶಿಕಾರಿಪುರದಲ್ಲಿ ಡಮ್ಮಿ ಅಭ್ಯರ್ಥಿ ಹಾಕಿದ್ದು ನಾವೇ ಅಂತಾ ಡಿಕೆ ಶಿವಕುಮಾರ್ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಅವತ್ತು ನಡೆದಿದ್ದು ಹೊಂದಾಣಿಕೆ ರಾಜಕಾರಣ. ದೊಡ್ಡ ದೊಡ್ಡವರು ಸೇರಿಕೊಂಡು ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದಾರೆ. ಈ ಪ್ರಾಸಿಕ್ಯೂಷನ್ ಮೂಲಕ ಹೊಂದಾಣಿಕೆ ರಾಜಕಾರಣ ನಿಂತು ಸ್ವಚ್ಚ ರಾಜಕಾರಣ ಮಾಡಲು ವೇದಿಕೆ ಸಿದ್ಧವಾಗಲಿ ಎಂದು ತಿಳಿಸಿದರು.
ಅಂದೇ ಸೈಟ್ ವಾಪಸ್ ನೀಡಿ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿ ಎಂಬ ನನ್ನ ಕಾಳಜಿ ಅಂದು ಸಿಎಂಗೆ ಅರ್ಥವಾಗಲಿಲ್ಲ. ಹೀಗಾಗಿ ಗಂಡಾಂತರ ಮೈಮೇಲೆ ಎಳೆದುಕೊಂಡಿದ್ದಾರೆ. ಈಗ ರಾಜ್ಯಪಾಲರ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದು ಹೇಳಿದರು.
ಹವಾಲಾ ಹಗರಣದಲ್ಲಿ ಅಡ್ವಾಣಿ ಹೆಸರು ಬಂದ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅದೇ ರೀತಿ ಪ್ರಾಸಿಕ್ಯೂಷನ್‌ಗೆ ಆದೇಶವಾದ ಕಾರಣ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟರು. ಕೇಜ್ರಿವಾಲ್ ಈಗ ಜೈಲಿನಿಂದಲೇ ಆಡಳಿತ ಮಾಡುತ್ತಿದ್ದಾರೆ. ಈಗ ಸಿಎಂ ಯಾವ ಹಾದಿ ಆಯ್ದು ಕೊಳ್ಳುತ್ತಾರೋ ನೋಡೋಣ ಎಂದರು.