ಬೆಂಗಳೂರು: ತಮಿಳುನಾಡಿಗೆ ನೀರು ಬಿಡುಗಡೆಯನ್ನು ನಿಲ್ಲಿಸಿ. ರಾಜ್ಯದ ಕಾಂಗ್ರೆಸ್ ಸರಕಾರವು ಪೂರ್ವಾಪರ ವಿವೇಚನೆ ಇಲ್ಲದೆ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದೆ. ಇದು ಖಂಡನಾರ್ಹ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮಂಡ್ಯ ಭಾಗದ ರೈತರಿಗೆ ಅನ್ಯಾಯ ಮಾಡಲಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು. ರಾಜ್ಯದ ನೀರಾವರಿ ಸಚಿವರು ಮತ್ತು ಕೃಷಿ ಸಚಿವರಿಗೆ ರಾಜ್ಯದ ರೈತರ ಕುರಿತು ಕಾಳಜಿ ಇಲ್ಲ. ತಮಿಳುನಾಡು ಸರಕಾರವು ರಿಟ್ ಅರ್ಜಿ ದಾಖಲಿಸಿದ ತಕ್ಷಣವೇ ಯಥೇಚ್ಛವಾಗಿ ನೀರು ಬಿಟ್ಟಿದ್ದಾರೆ. ಸುಮಾರು 12-13 ಟಿಎಂಸಿ ನೀರನ್ನು ಬಿಡಲಾಗಿದೆ ಎಂದು ಟೀಕಿಸಿದರು.ಎಂ.ಬಿ.ಪಾಟೀಲ್, ಬಸವರಾಜ ಬೊಮ್ಮಾಯಿಯವರು ನೀರಾವರಿ ಸಚಿವರಾಗಿದ್ದಾಗ ಇದೇ ರೀತಿ ಸಂಕಷ್ಟ ಬಂದಿತ್ತು. ಬಸವರಾಜ ಬೊಮ್ಮಾಯಿಯವರು ನೀರಾವರಿ ಸಚಿವರಾಗಿದ್ದಾಗ ಸಮಸ್ಯೆ ಬಂದಿತ್ತು. ಆಗ ತಮಿಳುನಾಡಿದ ಬೆಳೆ ಪ್ರಮಾಣದ ವಿವರವನ್ನು ಪಡೆದು ಸುಪ್ರೀಂ ಕೋರ್ಟಿಗೆ ಸಲ್ಲಿಸಿ ಸ್ಟೇ ಪಡೆಯಲಾಗಿತ್ತು ಎಂದು ತಿಳಿಸಿದರು.