ಮೈಸೂರು : ‘ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ, ಸುಳ್ಳು ವದಂತಿಗಳನ್ನು ಹರಡುವುದನ್ನು ತಕ್ಷಣವೇ ನಿಲ್ಲಿಸಬೇಕು’ ಎಂದು ಸಂಸ್ಕೃತಿ ಚಿಂತಕರಾದ ಡಾ. ಹೇಮಾನಂದೀಶ್ ಹೇಳಿದರು.
ಧರ್ಮಸ್ಥಳ ಭಾರತೀಯ ಸಂಸ್ಕೃತಿಯ ಆಧ್ಯಾತ್ಮಿಕ ಚಿಂತನೆಯ ಬೆನ್ನೆಲುಬಾಗಿ ನಿಂತಿದೆ. ಇದನ್ನು ಹಾಳು ಮಾಡಿದರೆ ಭಾರತೀಯ ಸಂಸ್ಕೃತಿಗೆ ದೊಡ್ಡ ಕೊಡಲಿ ಪೆಟ್ಟು ಕೊಟ್ಟಂತಾಗುತ್ತದೆ. ಈ ದುರುದ್ದೇಶದಿಂದ ಕೆಲವರು ನಮ್ಮ ಸಮಾಜದ ಒಳಗೆ ಸೇರಿದಂತೆ ದೇಶ, ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಜಾಲ ಮಾಡಿ ಪಿತೂರಿ ನಡೆಸುತ್ತಿದ್ದಾರೆ. ಕೆಲವರು ನ್ಯಾಯಾಧೀಶರಂತೆ ಸಾಮಾಜಿಕ ಜಾಲತಾಣಗಳಲ್ಲಿ ವರ್ತಿಸುತ್ತಿದ್ದಾರೆ. ಅವರು ಬಳಸುವ ಭಾಷೆ, ಮಾತು, ನಡೆ, ದೃಷ್ಟಿ, ಸಂಸ್ಕೃತಿ ಗಮನಿಸಿದರೆ ಇದರ ಹಿಂದಿರುವ ಅಪಪ್ರಚಾರ, ಸುಳ್ಳು ವದಂತಿ ತಿಳಿಯುತ್ತದೆ ಎಂದು ಆರೋಪಿಸಿದ್ದಾರೆ.
ಇಂತಹ ಸುಳ್ಳು ವದಂತಿಗಳಿಗೆ ಯಾರೂ ಕಿವಿಗೊಡಬಾರದು. ತಾಳ್ಮೆಯಿಂದ ಸತ್ಯ ವಿಮರ್ಶೆ ಮಾಡಬೇಕು. ಧರ್ಮಸ್ಥಳದ ಬಗ್ಗೆಯಾಗಲಿ, ವೀರೇಂದ್ರ ಹೆಗ್ಗಡೆ ಅವರ ಬಗ್ಗೆಯಾಗಲಿ ಅವಹೇಳನ ಮಾಡುವುದು ಮುಂದುವರೆದರೆ ತಕ್ಕ ಉತ್ತರ ನೀಡಬೇಕಾಗುತ್ತದೆ. ಭಾರತೀಯ ಸಂಸ್ಕೃತಿಯನ್ನು ಗೌರವಿಸುವ ಸಜ್ಜನ ನಾಗರಿಕರು ಮುಂದಿನ ದಿನಗಳಲ್ಲಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ದಂಗೆ ಏಳುವ ದಿನಗಳು ದೂರವಿಲ್ಲ ಎಂದು ಅವರು ಎಚ್ಚರಿಸಿದರು.
ಡ್ರಗ್ಸ್, ಭೂ ಮಾಫಿಯಾ, ಧರ್ಮ ಒಡೆಯುವವರೊಂದಿಗೆ ಕೈ ಜೋಡಿಸುವುದು ಸಮಾಜದ ದುರಂತ. ಇದು ಸಾಮಾನ್ಯ ಜನರ ಅರಿವಿಗೆ ಬರುತ್ತಿದೆ. ಧರ್ಮಸ್ಥಳ ಸಮಾಜದ ಎಲ್ಲಾ ಧರ್ಮ, ವರ್ಗ, ಶೋಷಿತರ, ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಇದನ್ನು ತಡೆಯಲು ಯಾರಿಂದಲೂj ಸಾಧ್ಯವಿಲ್ಲ ಎಂದರು.