ನವದೆಹಲಿ: “ಮಹಿಳೆಯರನ್ನು ಕೌಟುಂಬಿಕ ದೌರ್ಜನ್ಯಗಳಿಂದ ರಕ್ಷಿಸಲು ಮತ್ತು ಅವರಿಗೆ ನೆರವಾಗಲು ಕಠಿಣ ಕಾನೂನುಗಳನ್ನು ರಚಿಸಲಾಗಿದೆಯೇ ಹೊರತು, ಅದನ್ನು ಪತಿಯ ವಿರುದ್ಧ ದುರ್ಬಳಕೆ ಮಾಡಲು ಅಲ್ಲ.’ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮಹಾರಾಷ್ಟ್ರದ ಪುಣೆಯ ದಂಪತಿ ವಿಚ್ಛೇದನ ಪ್ರಕರಣದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ ಕೋರ್ಟ್ ಪತಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಕೇಸನ್ನು ವಜಾ ಮಾಡಿದೆ.
ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕೇಸು ಭಾರೀ ಸುದ್ದಿ ಮಾಡಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ವಿಚ್ಛೇದಿತ ಪತ್ನಿಯು ಪತಿಯ ಆಸ್ತಿ ಆಧಾರದಲ್ಲಿ ಪರಿಹಾರ ಕೇಳುವಂತಿಲ್ಲ. ಜೀವನಾಂಶವು ಪತ್ನಿ ಜೀವನಕ್ಕೆ ಆಧಾರ. ಅದು ಸುಲಿಗೆಯ ಮಾರ್ಗ ಆಗಬಾರದು. ಹೀಗಾಗಿ, ಮಹಿಳೆಯರು ಕಾಯ್ದೆ ಮೂಲಕ ಪರಿಹಾರ ಕಂಡುಕೊಳ್ಳುವಾಗ ಎಚ್ಚರಿಕೆ ವಹಿಸಬೇಕು. ಹಿಂದೂ ಧರ್ಮದಲ್ಲಿ ಮದುವೆಗೆ ವಿಶೇಷ ಮಾನ್ಯತೆಯಿದ್ದು, ಅದು ವ್ಯಾಪಾರವಾಗಬಾರದು ಎಂದು ಪೀಠ ಹೇಳಿದೆ.
ಪುಣೆ ಪ್ರಕರಣದಲ್ಲಿ ಪತ್ನಿಗೆ ಒಂದೇ ಕಂತಿನಲ್ಲಿ 12 ಕೋಟಿ ರೂ. ನೀಡಬೇಕೆಂದು ಸ್ಥಳೀಯ ಕೋರ್ಟ್ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು