ಬೆಂಗಳೂರು: ಕೇಂದ್ರ ಸರ್ಕಾರ ಜಾರಿ ತರಲು ನಿರ್ಧರಿಸಿರುವ ನೂತನ ಹಿಂಟ್ ಅಂಡ್ ರನ್ ಕಾನೂನು ವಿರೋಧಿಸಿ ಇಂದು ಮಧ್ಯರಾತ್ರಿಯಿಂದ ಕರೆ ನೀಡಲಾಗಿರುವ ಮುಷ್ಕರಕ್ಕೆ ಟ್ರಕ್ ಚಾಲಕರಿಂದಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘದ (ಎಫ್‌ಕೆಎಲ್‌ಒಎ) ಅಡಿಯಲ್ಲಿ ಟ್ರಕ್ಕರ್‌ಗಳ ಒಂದು ವಿಭಾಗವು ಭಾರತೀಯ ನ್ಯಾಯ ಸಂಹಿತೆಯಡಿಯಲ್ಲಿ ಹೊಸ ದಂಡದ ಕಾನೂನಿನ ವಿರುದ್ಧ ಬುಧವಾರ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಈ ಮುಷ್ಕರಕ್ಕೆ ಹಲವರು ಬೆಂಬಲ ಸೂಚಿಸಿದ್ದಾರೆಯಾದರೂ ಹಲವು ಟ್ರಕ್ ಚಾಲಕರು ಈ ಮುಷ್ಕರ ಅನಗತ್ಯ ಮತ್ತು ವಿಫಲವಾಗಲಿದೆ ಎಂದು ಹೇಳಿದ್ದಾರೆ.
ಈ ಕುರಿತು ಕರ್ನಾಟಕ ಲಾರಿ ಮಾಲೀಕರ ಸಂಘ ಎಫ್‌ಕೆಎಲ್‌ಒಎ ಗೌರವಾಧ್ಯಕ್ಷ ಬಿ ಚನ್ನಾ ರೆಡ್ಡಿ ಮಾತನಾಡಿ, ನಮ್ಮ ಉದ್ಯಮವು ಈಗಾಗಲೇ ಚಾಲಕರು ಮತ್ತು ಕ್ಲೀನರ್‌ಗಳ ಕೊರತೆಯನ್ನು ಎದುರಿಸುತ್ತಿದೆ. ರಸ್ತೆಯಲ್ಲಿ ಟ್ರಕ್‌ಗಳ ಸಂಖ್ಯೆ ಹೆಚ್ಚಿದ್ದರೂ, ಲಭ್ಯವಿರುವ ಚಾಲಕರ ಸಂಖ್ಯೆ ಕ್ಷೀಣಿಸುತ್ತಿದೆ. ಈ ಪರಿಸ್ಥಿತಿಯಲ್ಲಿ, ಕೇಂದ್ರ ಸರ್ಕಾರವು ಹಿಟ್ ಅಂಡ್ ರನ್ ಪ್ರಕರಣಗಳಿಗೆ ಕಠಿಣ ದಂಡವನ್ನು ತಂದಿದೆ. ಅಲ್ಲಿ ಚಾಲಕನಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 7 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಅಂತಹ ನಿಬಂಧನೆಗಳನ್ನು ಹಿಂಪಡೆಯುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು ತಾವು ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪತ್ರಗಳನ್ನು ಕಳುಹಿಸಿದ್ದೇನೆ ಎಂದು ಹೇಳಿದರು.
“ರಾಜ್ಯದಲ್ಲಿ 9 ಲಕ್ಷಕ್ಕೂ ಹೆಚ್ಚು ಟ್ರಕ್‌ಗಳಿದ್ದು, ಅವುಗಳಲ್ಲಿ 2 ಲಕ್ಷ ರಾಜ್ಯದೊಳಗೆ ಕಾರ್ಯನಿರ್ವಹಿಸುತ್ತಿವೆ. ನಾವು ಎಲ್ಲಾ ಟ್ರಕ್ಕರ್‌ಗಳಿಗೆ ಮುಷ್ಕರಕ್ಕೆ ಕರೆ ನೀಡಿದ್ದೇವೆ. ಹಾಲು, ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ತೊಂದರೆಯಾಗುವುದಿಲ್ಲ. ಮುಷ್ಕರವು ಪ್ರಾರಂಭವಾಗಲಿದೆ. ಎರಡನೇ ದಿನ ಅಂದರೆ ಶುಕ್ರವಾರ ಕೇಂದ್ರ ಸರ್ಕಾರದಿಂದ ಲಿಖಿತ ಭರವಸೆ ನೀಡಿದ ನಂತರವೇ ಅದನ್ನು ಹಿಂಪಡೆಯುತ್ತೇವೆ ಎಂದು ರೆಡ್ಡಿ ಹೇಳಿದ್ದಾರೆ.
ಫೆಡರೇಶನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ (ಎಫ್‌ಕೆಎಸ್‌ಎಲ್‌ಒಎಎ) ಅಧ್ಯಕ್ಷ ಜಿಆರ್ ಷಣ್ಮುಗಪ್ಪ ಮಾತನಾಡಿ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ದಂಡದ ನಿಬಂಧನೆಗಳನ್ನು ಸರ್ಕಾರವು ಸ್ಥಗಿತಗೊಳಿಸಲಿದೆ ಎಂದು ಹೇಳಿದ್ದು, ಹೀಗಾಗಿ ಎಫ್‌ಕೆಎಲ್‌ಒಎ ಕರೆ ನೀಡಿದ್ದ ಮುಷ್ಕರ ಅಗತ್ಯವಿಲ್ಲ ಎಂದು ಹೇಳಿದರು.