ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಪರವಾನಿಗೆ ಭೂಮಾಪಕರ ಸಂಘ ಮುಷ್ಕರ ನಡೆಸುತ್ತಿದ್ದು ಇದಕ್ಕೆ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ಸಂಘದಿಂದ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಮತ್ತು ಖಾಯಂ ನೌಕರನ್ನಾಗಿ ಮಾಡಬೇಕು ಎಂಬ ಎರಡು ಅಂಶದ ಬೇಡಿಕೆಗಳನ್ನು ಪ್ರಮುಖವಾಗಿಸಿಕೊಂಡಿರುವ ಪರವಾನಿಗೆ ಭೂಮಾಪಕರು ಇದನ್ನು ಸರ್ಕಾರ ಶೀಘ್ರ ಪರಿಹರಿಸದಿದ್ದರೆ ತಾಲೂಕು ಕಛೇರಿ ಮುಂದೆ ಅನಿರ್ದಿಷ್ಟ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ಪರವಾನಿಗೆ ಭೂಮಾಪಕರ ಸಂಘದ ಪದಾಧಿಕಾರಿಗಳು ನಾವುಗಳು ಹತ್ತಾರು ವರ್ಷಗಳಿಂದ ಪರವಾನಿಗೆ ಭೂಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಸರ್ಕಾರ ನಮ್ಮಗಳಿಗೆ ನೀಡುತ್ತಿರುವ ವೇತನ ಜೀವನ ಸಾಗಿಸಲು ಕಷ್ಟಕರವಾಗಿದೆ ಎಂದಿದ್ದಾರೆ.
ಎರಡು ತಾಲೂಕುಗಳಿಂದ 40 ಮಂದಿ ಪರವಾನಿಗೆ ಭೂಪಕರುಗಳಿದ್ದು ಎಲ್ಲರೂ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದೇವೆ ಎಂದು ತಮ್ಮ ಅಳಲು ತೊಂಡಿಕೊಂಡಿರುವ ಅವರು ಮುಂದಿನ ತಿಂಗಳಿನಿಂದ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ರೈತರಿಗೂ ಅನ್ಯಾಯ ಮಾಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.
ತಿಂಗಳ ವಾರಾಂತ್ಯಕ್ಕೆ ಹಾರಂಗಿ ಮತ್ತು ಚಾಮರಾಜ ನಾಲೆಗಳಿಗೆ ನೀರು ಹರಿಸುವುದರಿಂದ ರೈತರು ತಮ್ಮ ಜಮೀನಿಗೆ ಸಂಬಂಧಿಸಿದಂತೆ ಹದ್ದುಬಸ್ತು, ಪೋಡಿ ಸೇರಿದಂತೆ ಇತರೆ ಅರ್ಜಿಗಳನ್ನು ಸಲ್ಲಿಸಿದ್ದು ಅವರುಗಳನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ಸಂಘ ಕಳೆದ ಒಂದು ವಾರಗಳಿಂದ ರಾಜ್ಯಾದ್ಯಂತ ಮುಷ್ಕರ ನಡೆಸುತ್ತಿರುವುದರಿಂದ ರೈತರ ಕೆಲಸ ಸಕಾಲದಲ್ಲಿ ನಡೆಯದೇ ತಾಲೂಕು ಕಚೇರಿಗೆ ಅಲೆಯುವಂತಾಗಿದೆ ಆದ್ದರಿಂದ ಸರ್ಕಾರ ಶೀಘ್ರ ಈ ಬಗ್ಗೆ ಗಮನ ಹರಿಸುವಂತೆ ತಮ್ಮ ಹಕ್ಕೊತ್ತಾಯ ಮಂಡಿಸಿದ್ದಾರೆ.
ಈ ಸಂದರ್ಭದಲ್ಲಿ ಸರ್ವೆಯರ್ ಗಳಾದ ಶ್ರೀರಾಮಪುರ ಭಾಸ್ಕರ್, ಕೆ.ವಿ.ರಾಘು, ದಮ್ಮನಹಳ್ಳಿ ವಿಶ್ವ, ರಾಘವೇಂದ್ರ, ಎಚ್.ಎಸ್.ರಮೇಶ್, ಪ್ರಶಾಂತ, ರಂಗಪ್ಪ,ಮುರುಳಿ, ರಾಕೇಶ, ಮಹದೇವ ಸೋಮನಹಳ್ಳಿ, ಸೋಮಶೇಖರ್, ಸಚಿನ್, ಸಂಜಯ್, ಮಹದೇವ, ದಿನೇಶ, ವೆಂಕಟೇಶ್ ಮೂರ್ತಿ, ದೊರೆ ಸೇರಿದಂತೆ ಮತ್ತಿತರರು ಬೆಂಬಲ ವ್ಯಕ್ತಪಡಿಸಿದರು.