ಬಳ್ಳಾರಿ: ಜನ ಸಾಮಾನ್ಯರ ಏಳಿಗೆಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಹತ್ತರವಾದ ಐದು ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳು ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ರಾಜ್ಯ ಗ್ಯಾರಂಟಿ ಪ್ರಾಧಿಕಾರದ ವಿಭಾಗದ ಉಪಾಧ್ಯಕ್ಷ ಎಸ್.ಆರ್ ಮೆಹರೋಜ್ ಖಾನ್ ತಿಳಿಸಿದರು.
ನಗರದ ಕೋಟೆ ಪ್ರದೇಶದ ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳ ಪರವಾಗಿ ರಾಜ್ಯಾದ್ಯಂತ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ, ವಿದ್ಯಾರ್ಥಿಗಳಿಗೆ ಗೃಹಿಣಿಯರಿಗೆ, ವಿದ್ಯುತ್ ಗ್ರಾಹಕರಿಗೆ ಹಾಗೂ ಯುವಕರಿಗೆ ಸೇರಿದಂತೆ ಸಮಾಜದ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತಿದೆ ಎಂದು ಹೇಳಿದರು. ಗ್ಯಾರಂಟಿ ಯೋಜನೆಯು ಪಕ್ಷಾತೀತವಾದ ಹಾಗೂ ಜನಪರವುಳ್ಳ ಸಾಮಾಜಿಕ ಕಾರ್ಯಕ್ರಮವಾಗಿದ್ದು, ಅರ್ಹ ಸಾರ್ವಜನಿಕರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಇದರ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಾಮಾಜಿಕ ಕಳಕಳಿ ಹೊಂದಿರುವ ಐದು ಗ್ಯಾರಂಟಿ ಯೋಜನೆಗಳು ಜಿಲ್ಲೆಯಾದ್ಯಂತ ಶೇ.95 ರಷ್ಟು ಅನುಷ್ಠಾನಗೊಂಡಿದ್ದು, ಫಲಾನುಭವಿಗಳು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎನ್ನುವುದು ಸಂತಸಕರ ವಿಷಯವಾಗಿದೆ. ಮುಂದಿನ ದಿನಮಾನಗಳಲ್ಲಿ ಶೇ.100 ರಷ್ಟು ಅನುಷ್ಠಾನಗೊಳಿಸಲು ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಕೆಲ ತಾಂತ್ರಿಕ ಲೋಪದೋಷದಿಂದ ಸಕಾಲಕ್ಕೆ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಲು ವಿಳಂಬವಾಗುತ್ತಿದೆಯೇ ಹೊರತು ಯಾವುದೇ ಕಾರಣಕ್ಕೂ ನಿಲ್ಲಿಸಲಾಗುವುದಿಲ್ಲ. ಯೋಜನೆಗಳ ಅನುಷ್ಠಾನಕ್ಕೆ ವಾರ್ಷಿಕ 53 ಸಾವಿರ ಕೋಟಿ ವಿನಿಯೋಗಿಸಲು ಅನುದಾನ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ ಒಟ್ಟು 3,01,180 ಪಡಿತರ ಚೀಟಿದಾರರಿದ್ದು ಗೃಹಲಕ್ಷ್ಮೀ ಯೋಜನೆಯಡಿ 2,77,494 ನೋಂದಣಿಯಾಗಿವೆ. ಈ ಪೈಕಿ 601 ಕೋಟಿ ರೂಪಾಯಿ ವೆಚ್ಚ ಭರಿಸಲಾಗಿದೆ ಎಂದು ಮಾಹಿತಿ ನೀಡಿದರು. ಗೃಹಲಕ್ಷಿö್ಮÃ ಯೋಜನೆಗೆ ಇನ್ನುಳಿದ ಅರ್ಹ ಪಡಿತರ ಚೀಟಿದಾರರು ಸಹ ನೋಂದಣಿ ಮಾಡಿಕೊಳ್ಳುವಂತೆ ಅರಿವು ಮೂಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಿಗೆ ತಿಳಿಸಿದರು.
ಶಕ್ತಿ ಯೋಜನೆಯಡಿ 2.94 ಕೋಟಿ ಫಲಾನುಭವಿಗಳು ಪ್ರಯಾಣಿಸಿದ್ದು, 110 ಕೋಟಿ ರೂ. ವೆಚ್ಚವಾಗಿದೆ ಎಂದರು. ಪ್ರಯಾಣಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಸಮಸ್ಯೆಯಾಗದಂತೆ ಎಚ್ಚರವಹಿಸಲು ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.
ಜಿಲ್ಲೆಯಲ್ಲಿ 3,02,898 ಅರ್ಹ ವಿದ್ಯುತ್ ಬಳಕೆದಾರರಿದ್ದು ಗೃಹ ಜ್ಯೋತಿ ಯೋಜನೆಯಡಿ 2,74,775 ಗ್ರಾಹಕರು ನೋಂದಾಯಿಸಿಕೊAಡಿದ್ದು, 1.20 ಕೋಟಿ ವೆಚ್ಚ ವ್ಯಯವಾಗಿದೆ ಎಂದರು. ಯೋಜನೆಯಿಂದ ಹೊರಗುಳಿದ ಅರ್ಹ ವಿದ್ಯುತ್ ಗ್ರಾಹಕರಿಗೆ ಮನವೊಲಿಸಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸದರು.
ಅನ್ನಭಾಗ್ಯ ಯೋಜನೆಯಡಿ 31 ಲಕ್ಷ ಫಲಾನುಭವಿಗಳಿಗೆ 175 ಕೋಟಿ ವೆಚ್ಚ ಭರಿಸಲಾಗಿದೆ. ಗ್ರಾಹಕರಿಗೆ ಉತ್ತಮ ಗುಣ ಮಟ್ಟದ ಆಹಾರ ಪೂರೈಕೆಯಾಗುವಂತೆ ಜವಾಬ್ದಾರಿ ವಹಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಿಗೆ ತಿಳಿಸಿದರು. ಯುವನಿಧಿ ಯೋಜನೆಯಡಿ 5,863 ಫಲಾನುಭವಿಗಳಿಗೆ 1 ಕೋಟಿ 76 ಲಕ್ಷ ಭರಿಸಲಾಗಿದೆ. ಅರ್ಹ ಯುವ ಸಮೂಹ ಹೆಚ್ಚಾಗಿ ನೋಂದಾಯಿಸಿಕೊಳ್ಳಲು ಅರಿವು ಮೂಡಿಸಬೇಕು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅಧಿಕಾರಿಗಳಿಗೆ ಹೇಳಿದರು.
ಡಾ.ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಮಾತನಾಡಿ, ಸರ್ಕಾರದ ಪ್ರತಿಷ್ಠಿತ ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರು ಸುಸ್ಥಿರವಾಗಿ ಜೀವನ ನಡೆಸುವುದ್ದಕ್ಕೆ ಸಹಕಾರಿಯಾಗಿದ್ದು, ಇದರಿಂದ ಮಹಿಳಾ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣವಾಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಿದಾನಂದಪ್ಪ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ತುಂಬಾ ಅನುಕೂಲವಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಸಂಬAಧಪಟ್ಟ ಇಲಾಖೆಗಳೊಂದಿಗೆ ಸಹಕಾರದಿಂದ ಕೆಲಸ ನಿರ್ವಹಿಸಲಾಗುವುದು ಎಂದು ತಿಳಿಸಿದರು.
ಫಲಾನುಭವಿಗಳ ಅನಿಸಿಕೆ: ಗೃಹಲಕ್ಷ್ಮೀ ಹಣದಿಂದಾಗಿ ಮಕ್ಕಳ ಟ್ಯೂಷನ್, ಫೀಸ್, ರೇಷನ್ ಖರೀದಿ ಮತ್ತು ಸಂಸಾರ ನಿಭಾಯಿಸಲು ಸಹಾಯವಾಗಿದೆ. – ರಾಜೇಶ್ವರಿ, ಬಳ್ಳಾರಿ ಬೆಂಗಳೂರಿನ ಕೋಚಿಂಗ್ ಸೆಂಟರ್‌ನಲ್ಲಿ ನನ್ನ ಮಗಳು (ವಿ.ವೆರೋಲಿಕಾ) ಕೆಎಎಸ್ ಪರೀಕ್ಷಾ ತರಬೇತಿ ನಡೆಸುತ್ತಿದ್ದು, ಊರಿಗೆ ಬಂದು ಹೋಗಲು ಮತ್ತು ನಾವು ಮಗಳನ್ನು ನೋಡಿಕೊಂಡು ಬರೋಕೆ ಹೋಗುವುದ್ದಕ್ಕೆ ಸರ್ಕಾರದ ಶಕ್ತಿ ಯೋಜನೆಯು ಉಪಯೋಗವಾಗಿದೆ – ರಾಣಿ, ಬಳ್ಳಾರಿ
ಸ್ಪರ್ಧಾತ್ಮಕ ಪರೀಕ್ಷೆಗಳ ಫೀಸ್ ತುಂಬಲು ಹಾಗೂ ಬ್ಯಾಚುಲರ್ ರೂಂನ ಬಾಡಿಗೆ ಕಟ್ಟಲು ಯುವನಿಧಿ ಹಣ ಉಪಯೋಗವಾಗುತ್ತಿದೆ. -ವೆಂಕಟೇಶ, ಸ್ನಾತ್ತಕೋತ್ತರ ಪದವೀಧರ
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷೆ ಆಶಾಲತಾ ಸೋಮಪ್ಪ, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ರಾಹುಲ್ ಶರಣಪ್ಪ ಸಂಕನೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪದಾಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು