ಹೊಸದಿಲ್ಲಿ : ಚಿಲಿಯ ಆಂಟೊಫಗಸ್ಟಾದಲ್ಲಿ ಗುರುವಾರ 6.1 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ(EMSC) ಮಾಹಿತಿ ನೀಡಿದೆ. ಭೂಕಂಪನವು ಕ್ಯಾಲಮಾದಿಂದ 84 ಕಿ.ಮೀ. ವಾಯುವ್ಯಕ್ಕೆ ಸಂಭವಿಸಿದೆ ಎಂದು EMSC ತಿಳಿಸಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊ ವೈರಲ್ ಆಗಿದೆ, ಆದರೆ ಯಾವುದೇ ಗಾಯಗಳು ಅಥವಾ ಪ್ರಾಣ ಹಾನಿ ಸಂಭವಿಸುವ ಬಗ್ಗೆ ತಕ್ಷಣಕ್ಕೆ ಮಾಹಿತಿ ಲಭ್ಯವಾಗಿಲ್ಲ. ಯಾವುದೇ ಸುನಾಮಿಯ ಎಚ್ಚರಿಕೆಗಳನ್ನು ಕೂಡ ನೀಡಲಾಗಿಲ್ಲ.
ಚಿಲಿಯ ಕಾಲಮಾನ ಬೆಳಗ್ಗೆ 6.37ಕ್ಕೆ ಭೂಕಂಪವು ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು ಚಿಲಿಯ ಕೊಕ್ರೇನ್ನಿಂದ ಪಶ್ಚಿಮ ವಾಯುವ್ಯಕ್ಕೆ 278 ಕಿಲೋಮೀಟರ್ ದೂರದಲ್ಲಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಕೊಕ್ರೇನ್ ಪ್ಯಾಟಗೋನಿಯಾ ವಿರಳ ಜನಸಂಖ್ಯೆ ಇರುವ ಪ್ರದೇಶವಾಗಿದೆ. 2010ರಲ್ಲಿ ಚಿಲಿಯಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪ ಮತ್ತು ಸುನಾಮಿ ಸಂಭವಿಸಿತ್ತು. ಘಟನೆಯಲ್ಲಿ 526 ಮಂದಿ ಮೃತಪಟ್ಟಿದ್ದರು.