ರಾಯಚೂರು: ಪ್ರಿಯತಮನ ಕಿರುಕುಳಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ಪಾಗಲ್ ಪ್ರೇಮಿಯ ಟಾರ್ಚರ್ ಕುರಿತ ಹಲವು ವಿಚಾರಗಳು ಬೆಳಕಿಗೆ ಬಂದಿದೆ.
ಯುವತಿಯೊಂದಿಗೆ ಮದುವೆ ನಿಶ್ಚಯವಾಗಿದ್ದ ಯುವಕನಿಗೆ, ಪಾಗಲ್ ಪ್ರೇಮಿ ವಿದ್ಯಾರ್ಥಿನಿ ಜೊತೆಗಿನ ಫೋಟೊ, ವಿಡಿಯೋ, ಆಡಿಯೋ ಕಳುಹಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ರಾಯಚೂರು ತಾಲ್ಲೂಕಿನ ಅರಷಣಗಿ ಗ್ರಾಮದಲ್ಲಿ ಇದೇ ಜುಲೈ 30 ರಂದು ನೇಣು ಬಿಗಿದುಕೊಂಡು ಹಂಪಮ್ಮ(16) ಆತ್ಮಹತ್ಯೆ ಮಾಡಿಕೊಂಡಿದ್ದಳು.
ಅರಷಣಗಿ ಗ್ರಾಮದ ಮೃತ ಹಂಪಮ್ಮನ ಎದುರಿನ ಮನೆಯಲ್ಲೇ ವಾಸವಿದ್ದ ರಮೇಶ್ ಎಂಬ ಯುವಕ ಕಿರುಕುಳ ನೀಡಿದ್ದು, ಗೊತ್ತಾಗಿತ್ತು.
ಆರೋಪಿ ರಮೇಶ್ ಕಳೆದ ಒಂದು ವರ್ಷದಿಂದ ಹಂಪಮ್ಮಳನ್ನು ಪ್ರೀತಿಸುತ್ತಿದ್ದ. ಈ ವಿಚಾರ ತಿಳಿದ ಪೋಷಕರು ಆಕೆಯನ್ನು ಎಂಟನೇ ತರಗತಿಗೆ ಶಾಲೆ ಬಿಡಿಸಿದ್ದರು. ಅಲ್ಲದೇ ಮದುವೆಗಾಗಿ ಆಕೆಗೆ ಸಂಬಂಧಿಕರಲ್ಲೇ ಗಂಡು ಹುಡುಕಿದ್ದರು. ಆಗ ಹಂಪಮ್ಮಳ ಮನೆಗೆ ಬಂದು ಆರೋಪಿ ರಮೇಶ್ ಗಲಾಟೆ ಮಾಡಿದ್ದ. ನಂತರ ಮದುವೆಯಾಗಬೇಕಿದ್ದ ಹುಡುಗನಿಗೆ ಆಕೆ ಜೊತೆ ಮಾತನಾಡಿದ್ದ ಆಡಿಯೋಗಳು, ವಿಡಿಯೋಗಳು, ಫೋಟೊಗಳನ್ನು ಕಳುಹಿಸಿದ್ದ.
ಇದನ್ನೆಲ್ಲಾ ಗಮನಿಸಿದ ಮದುವೆಯಾಗಬೇಕಿದ್ದ ಯುವಕ ಮದುವೆಯನ್ನು ಕ್ಯಾನ್ಸಲ್ ಮಾಡಿದ್ದ. ಮಗಳ ಮದುವೆ ಕ್ಯಾನ್ಸಲ್ ಆಗಿದ್ದಕ್ಕೆ ಮಾನಸಿಕವಾಗಿ ನೊಂದ ಹಂಪಮ್ಮಳ ತಂದೆ ದೇವೆಂದ್ರ ಆಸ್ಪತ್ರೆ ಸೇರಿದ್ದರು.
ಇಷ್ಟಾದರೂ ಹಂಪಮ್ಮಳ ಬೆನ್ನು ಬಿಡದ ರಮೇಶ್ ತನ್ನನ್ನು ಮದುವೆಯಾಗುವಂತೆ ಟಾರ್ಚರ್ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಮನನೊಂದು ಯುವತಿ ನೇಣಿಗೆ ಶರಣಾಗಿದ್ದಳು.
ಘಟನೆ ಬಳಿಕ ಆರೋಪಿ ರಮೇಶ್ ನನ್ನು ಪೊಲೀಸರು ಬಂಧಿಸಿದ್ದರು. ರಾಯಚೂರು ಮಹಿಳಾ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.