ಮೈಸೂರು: ವಿದ್ಯಾರ್ಥಿಗಳು ಹಠ, ಛಲದಿಂದ ಗುರಿ ಇಟ್ಟುಕೊಂಡು ಶ್ರಮಪಟ್ಟು ಓದಿದರೆ ಜೀವನದಲ್ಲಿ ಸಾಧನೆ ಮಾಡಿ ಯಶಸ್ವಿಯಾಗಬಹುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ತಿಳಿಸಿದರು.
ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಾರದ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಾನು ಓದುವಾಗ ತುಂಬಾ ಕಷ್ಟವಿತ್ತು. ನಿಮಗೆ ಆ ಸಮಸ್ಯೆ ಇಲ್ಲ. ನಾನೊಬ್ಬ ಮಾಜಿ ಸೈನಿಕನಾಗಿ ದೇಶಸೇವೆ ಮಾಡಿದ್ದೇನೆ. ಪ್ರತಿಯೊಬ್ಬರು ಸಹ ಅವರದೇ ಆದ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಇಂದು ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಓದಿದರೂ ಸಾಲದು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿದರೆ ನಿಮ್ಮ ಜ್ಞಾನ ಹೆಚ್ಚಾಗುತ್ತದೆ. ಅಬ್ದುಲ್ ಕಲಾಂ, ಅಂಬೇಡ್ಕರ್, ವಿಶ್ವೇಶ್ವರಯ್ಯರವರ ಜೀವನ ಚರಿತ್ರೆಗಳನ್ನು ಓದಿಕೊಂಡು ಅವರ ಆದರ್ಶ, ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿರಿ. ವಿಜಯ ಸಂಕೇಶ್ವರರಂತೆ ಯಶಸ್ವಿ ಉದ್ಯಮಿಯಾಗಿ. ಕನ್ನಡ ಭಾಷೆಯ ಜೊತೆಗೆ ಎಲ್ಲಾ ಭಾಷೆಗಳನ್ನು ಕಲಿಯಿರಿ. ದೇಶ ನಾಡು ನುಡಿಯ ಬಗ್ಗೆ ಸ್ವಾಭಿಮಾನಿಗಳಾಗಿರಿ. ನಿಮ್ಮ ಗುರುಗಳು ಹೇಳಿದ್ದನ್ನು ಶ್ರದ್ಧೆಯಿಂದ ಪಾಲಿಸಿ ಜೀವನದಲ್ಲಿ ಯಶಸ್ವಿಯಾಗಿ ಎಂದರು.
ಇದೇ ಸಂದರ್ಭದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಎನ್.ಸಿ.ಸಿ. ಸಾಧಕರಿಗೆ ಸಾಂಸ್ಕೃತಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ, ಡಾ. ಹೆಚ್.ಆರ್. ತಿಮ್ಮೇಗೌಡ, ಡಾ. ಹೆಚ್. ಶ್ರೀಧರ್, ಎನ್. ಸುನೀಲ್ ಉಪಸ್ಥಿತರಿದ್ದರು.