ಮೈಸೂರು : ಮನುಷ್ಯನ ಜೀವನದಲ್ಲಿ ಶಿಕ್ಷಣ ಬಹಳ ಮುಖ್ಯವಾಗಿರುವುದರಿಂದ ವಿದ್ಯಾರ್ಥಿಗಳು ಶ್ರಮವಹಿಸಿ ಛಲದಿಂದ ಗುರಿ ಇಟ್ಟುಕೊಂಡು ಸಾಧನೆ ಮಾಡುವುದರೊಂದಿಗೆ ಶಂಕರಾಚಾರ್ಯರ ತತ್ತಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಕರೆ ನೀಡಿದರು.
ನಗರದ ಶೃಂಗೇರಿ ಶಂಕರ ಮಠದ ಆವರಣದಲ್ಲಿ ಕರ್ನಾಟಕ ಸೇನಾ ಪಡೆಯ ವತಿಯಿಂದ ಭಾನುವಾರ ನಡೆದ ಶ್ರೀ ಶಂಕರಜಯಂತಿ ಹಾಗೂ ತತ್ವಜ್ಞಾನಿಗಳ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಶ್ರೀ ಶಂಕರಾಚಾರ್ಯ ಸೇವಾರತ್ನ ಪ್ರಶಸ್ತಿ ಹಾಗೂ ಎಸ್.ಎಸ್.ಎಲ್.ಸಿ. ಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಮಾತನಾಡಿದ ಅವರು, ನಾನು ವಿದ್ಯಾರ್ಥಿಯಾಗಿದ್ದಾಗ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿರಲಿಲ್ಲ. ನಾನು ಚಿಕ್ಕವನಿದ್ದಾಗ ನನಗೆ ಹಾಕಿಕೊಳ್ಳಲು ಬಟ್ಟೆಯೇ ಇರಲಿಲ್ಲ. ಇಂದು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಂಘಸಂಸ್ಥೆಗಳು ಪ್ರೋತ್ಸಹಿಸುತ್ತಿವೆ. ಜ್ಞಾನ ಯಾರ ಸ್ವತ್ತು ಅಲ್ಲ ಪ್ರತಿಭೆ ಎಲ್ಲಾ ಮಕ್ಕಳಲ್ಲಿಯೂ ಇರುತ್ತದೆ ಇಂದು ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಓದಿದರೂ ಸಾಲದು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ದೇಶ, ಭಾಷೆ, ನೆಲ, ಜಲದ ಬಗ್ಗೆ ಶಂಕರಾಚಾರ್ಯ, ಗಾಂಧೀಜಿ, ಅಂಬೇಡ್ಕರ್, ಬಸವಣ್ಣರಂತಹ ಮಹಾನೀಯರ ಬಗ್ಗೆಯೂ ಓದಿ ತಿಳಿದುಕೊಳ್ಳಬೇಕು.

ಸಮಾಜಕ್ಕೆ ಆದರ್ಶವಾಗುವ ಪೀಳಿಗೆಯಾಗಬೇಕು. ತಂದೆತಾಯಿಯನ್ನು ಗೌರವಿಸುವ ಮನುಷ್ಯತ್ವಕ್ಕೆ ಬೆಲೆಕೊಡುವ ಮಕ್ಕಳು ನೀವಾಗಬೇಕು. ಈ ಭೂಮಿಯ ಮೇಲೆ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗುವಂತಹ ಸಾಧನೆ ಮಾಡಬೇಕು ಎಂದ ಅವರು, ಇಂದು ಹೆಣ್ಣುಮಕ್ಕಳು ಎಲ್ಲಾ ರಂಗದಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಹೆಣ್ಣುಮಕ್ಕಳು ಯಾರಿಗೂ ಕಡಿಮೆಯಿಲ್ಲದಿರುವುದರಿಂದ ಈ ಸಮಾಜಕ್ಕೆ ಶಕ್ತಿಯಾಗಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಡಿ.ಟಿ. ಪ್ರಕಾಶ್, ಡಾ ಲೀಲಾಪ್ರಕಾಶ್, ಗೋಪಾಲಗೌಡ ಆಸ್ಪತ್ರೆಯ ನ್ಯೂರೋಜೋನ್‌ನ ಡಾ ಶುಶ್ಲತ್‌ಗೌಡ, ವಿಜಯವಿಠಲ ಕಾಲೇಜಿನ ಪ್ರಾಂಶುಪಾಲರಾದ ಸತ್ಯಪ್ರಸಾದ್, ಡಾ. ಕೆ.ವಿ. ಲಕ್ಷ್ಮಿದೇವಿ, ಆರ್. ಆದರ್ಶ್, ಸಿ. ನಾರಾಯಣಗೌಡ, ಎಸ್. ಜಯಪ್ರಕಾಶ್, ತೇಜೇಶ್ ಲೋಕೇಶ್‌ಗೌಡ ಹಾಜರಿದ್ದರು.