ಗುಂಡ್ಲುಪೇಟೆ: ವಿದ್ಯಾರ್ಥಿಗಳು ಅಂಕ ಪಡೆಯುವ ಜೊತೆಗೆ ಸಂಸ್ಕಾರ ಕಲಿಯುವುದು ಮುಖ್ಯ ಎಂದು ಶ್ರೀ ಮದ್ದಾನೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಶ್ರೀ ಮದ್ದಾನೇಶ್ವರ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ 2022-23ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಮತ್ತು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಶಾಲೆಯ 42 ವಿದ್ಯಾರ್ಥಿಗಳು ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಪ್ರಸ್ತುತ ಎಸ್‍ಎಸ್‍ಎಲ್‍ಸಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಮುಂದೆ ಪುರಸ್ಕಾರ ಪಡೆಯುವ ಕಡೆಗೆ ಯೋಚಿಸಿ ಎಂದು ಕಿವಿಮಾತು ಹೇಳಿದರು.
ಬಿಲ್ವಿದ್ಯೆ ಪ್ರವೀಣರೆನಿಸಿದ ಅರ್ಜುನ, ಏಕಲವ್ಯರಂತೆ ಏಕಾಗ್ರತೆ ಸಾಧಿಸುವ ಮೂಲಕ ವಿದ್ಯಾರ್ಥಿಗಳು ಓದಿನಲ್ಲಿ ಮುಂದೆ ಬರಬೇಕು. ಓದಿನಲ್ಲಿ ಏಕಾಗ್ರತೆ ಬಹುಮುಖ್ಯವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಏಕಾಗ್ರತೆ ರೂಢಿಸಿಕೊಳ್ಳುವ ಕಡೆಗೆ ಗಮನ ನೀಡಿ. ವಿದ್ಯೆಗೆ ಅಂಕ ಮಾನದಂಡ ಎಂಬುದು ಸರಿಯಲ್ಲ. ಹೆಚ್ಚು ಅಂಕ ಗಳಿಸಿದವರು ಪರಿಪೂರ್ಣರಲ್ಲ. ಜೊತೆಗೆ ವಿನಯವನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್ ಮಾತನಾಡಿ, ಮಾತೃಭಾಷೆಯಾದ ಕನ್ನಡವನ್ನು ಕನ್ನಡದ ಜೊತೆಗೆ ಆಂಗ್ಲ ಮಾಧ್ಯಮದವರು ಆರಾಧಿಸಿ. ಕನ್ನಡ ಭಾಷೆ ಅನ್ನ ಕೊಡಲ್ಲ ಅನ್ನೋದು ಸುಳ್ಳು. ಹಿಂದಿನ ತಲೆಮಾರಿನವರಿಗೆ ಕನ್ನಡ ಎಲ್ಲವನ್ನು ಕೊಟ್ಟಿದೆ. ಆದ್ದರಿಂದ ಉತ್ತಮ ರೀತಿಯಲ್ಲಿ ಕಲಿಯಲು ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಿ. ಜ್ಞಾನದ ಮೂಲಕ ಜಗತ್ತಿಗೆ ಶಾಂತಿ ಕೊಡಿ. ಜೊತೆಗೆ ಇಂದು ಪುರಸ್ಕಾರ ಪಡೆದ ಶಾಲೆಯ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಮಹಾ ಪುರಸ್ಕಾರ ಪಡೆದುಕೊಳ್ಳುವಂತಾಗಿ ಎಂದು ಹಾರೈಸಿದರು.
ಮಕ್ಕಳನ್ನು ಹಣ ಸಂಪಾದನೆಯ ಮೆಷಿನ್, ಇಂಜಿನಿಯರ್ ಅಥವಾ ವೈದ್ಯರಾದರೆ ಮುಕ್ತಿ ಎಂದು ತಿಳಿಯದೇ ಅವರ ಸಾಮಥ್ರ್ಯದ ಅನುಸಾರ ಬೆಳೆಯಲು ಬಿಡಿ. ಸಮಾಜ ಸರ್ವಕಾಲಕ್ಕೂ ಸ್ಮರಿಸುವ ಕೊಡುಗೆ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಅವರ ತಾಯಿ ಕೆಂಪನಂಜಮ್ಮಣ್ಣಿ ಕೊಟ್ಟಂತಹ ಶಿಕ್ಷಣವನ್ನು ತಾಯಂದಿರುವ ನಿಮ್ಮ ಮಕ್ಕಳಿಗೆ ಕೊಡಿಸಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಮದ್ದಾನೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಸಿ.ಸ್ವಾಮಿ, ಮದ್ದಾನೇಶ್ವರ ಪಬ್ಲಿಕ್ ಶಾಲೆ ಪ್ರಾಂಶುಪಾಲ ನಟರಾಜು, ಮುಖ್ಯಶಿಕ್ಷಕ ಪ್ರಕಾಶ್ ಸೇರಿದಂತೆ ಸಿಬ್ಬಂದಿ ವರ್ಗ ಹಾಗು ವಿದ್ಯಾರ್ಥಿಗಳು ಹಾಜರಿದ್ದರು.