ಮೈಸೂರು: ವಿದ್ಯಾರ್ಥಿಗಳು ಮಹಾಪುರುಷರ ಹಾಗೂ ಮಹಾ ಮಹಿಳೆಯರ ಜೀವನ ಚರಿತ್ರೆಗಳನ್ನು ಓದಬೇಕು. ಆ ಮೂಲಕ ತಮ್ಮ ಜೀವನವನ್ನು ಉದಾತ್ತಗೊಳಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ಎಸ್‌ಬಿಆರ್‌ಆರ್ ಮಹಾಜನ ಪ್ರಥಮದರ್ಜೆ ಕಾಲೇಜಿನ ಮಂದಾರ ವಾರ್ಷಿಕ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಸಂಚಿಕೆ ಉತ್ತಮ ಲೇಖನಗಳನ್ನು ಒಳಗೊಂಡಿದೆ. ಈ ಸಂಚಿಕೆ ಚತುರ್ಭಾಷಾ ಸಂಚಿಕೆಯಾಗಿದ್ದು, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಕೂಡ ತಮ್ಮ ಸೃಜನಶೀಲತೆ ಮೆರೆದಿದ್ದಾರೆ. ಮಂದಾರ ಎಂದರೆ ಸ್ವರ್ಗದ ನಂದನವನದ ಹೂ ಅಲ್ಲದೆ ಸ್ವರ್ಗಕ್ಕೆ ಮಂದಾರ ಎಂಬ ಹೆಸರಿದೆ ಎಂದು ತಿಳಿಸಿದರು.
ನಾವಿರುವ ಭೂಮಿಯನ್ನೇ ಸ್ವರ್ಗವನ್ನಾಗಿ ಮಾಡಿಕೊಳ್ಳಬೇಕು. ಇಂತಹ ವಾರ್ಷಿಕ ಸಂಚಿಕೆಗಳಿಂದ ಸಾಹಿತ್ಯದ ಅನುಸಂಧಾನ, ವಿದ್ಯಾರ್ಥಿಗಳಿಗೆ ಓದು, ಬರಹದ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆಯಂತೆ ಪಠ್ಯೇತರ ಚಟುವಟಿಕೆ ಅಷ್ಟೇ ಮುಖ್ಯ ಯುವ ಜನಾಂಗಕ್ಕೆ ಸ್ವಾಮಿ ವಿವೇಕಾನಂದರಿಗಿಂತ ಮತ್ತೊಂದು ಆದರ್ಶವಿಲ್ಲ. ಪಂಪನ ಮನುಷ್ಯ ಜಾತಿ ತಾನೊಂದೇ ವಲಂ ಎಂಬ ಮಾತನ್ನು ಉಲ್ಲೇಖಿಸುತ್ತಾ, ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಪ್ರತಿಯೊಬ್ಬರು ಅನುಷ್ಠಾನಕ್ಕೆ ತರಬೇಕು ಎಂದರು.
ನಭಕೇರಿದ ಅಪರಂಜಿ ಎಂಬ ಶೀರ್ಷಿಕೆಯಲ್ಲಿ ನ.ಭದ್ರಯ್ಯನವರ ಕುರಿತ ಡಾ.ಎಚ್.ಆರ್. ತಿಮ್ಮೇಗೌಡರು ಬರೆದ ಲೇಖನ ಓದಿದ ಪ್ರೊ.ಸಿ.ಪಿ.ಕೆ ಅವರು ನ.ಭದ್ರಯ್ಯನವರು ತಮಗೆ ಮಾಡಿದ ಸಹಾಯ ಸ್ಮರಿಸಿದರು.
ಮಹಾಜನ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಆರ್.ಜಯಕುಮಾರಿ ಮಾತನಾಡಿ, ಮಂದಾರ ಸಂಚಿಕೆ ವಿದ್ಯಾರ್ಥಿಗಳ ಅಂತರಂಗದ ಪ್ರತಿನಿಧಿ. ಪ್ರೊ.ಸಿ.ಪಿ.ಕೆ ಅವರು ತುಂಬಿದ ಕೊಡದಂತೆ ನಿರಹಂಕಾರ ಪ್ರವೃತ್ತಿ ಉಳ್ಳವರು. ಜೊತೆಗೆ ಮಾದರಿ ಶಿಕ್ಷಕರಾಗಿದ್ದಾರೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣ ಮಾಡಲಿಕ್ಕೆ ಹಾಗೂ ಅವರ ಬರವಣಿಗೆಯ ಅಭಿವ್ಯಕ್ತಿಯನ್ನ ಹೆಚ್ಚಿಸಲು ಮಾದರಿ ಅಧ್ಯಾಪಕರ ಅಗತ್ಯವಿದೆ. ಬರವಣಿಗೆ ಸುಲಭದ ಕೆಲಸವಲ್ಲ ಅದೊಂದು ತಪಸ್ಸು. ಶ್ರದ್ಧೆ, ಭಕ್ತಿ, ಪ್ರೀತಿ, ಬದ್ಧತೆ, ಏಕಾಗ್ರತೆ ಇದ್ದರೆ ಮಾತ್ರ ವಿದ್ಯಾರ್ಥಿಗಳ ಒಳಗಿರುವ ಬೆಳಕು ಹೊರಹೊಮ್ಮಲು ಸಾಧ್ಯವೆಂದು ನುಡಿದರು. ವಿದ್ಯಾರ್ಥಿಯೊಳಗಿನ ಕವಿ ಮನಸ್ಸನ್ನು ಜಾಗೃತಗೊಳಿಸುವಲ್ಲಿ ಕಾಲೇಜಿನ ಮಂದಾರದ ಪಾತ್ರ ದೊಡ್ಡದೆಂದು ಪ್ರಶಂಸಿಸಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ತಿಮ್ಮೇಗೌಡ, ಗ್ರಾಮೀಣ ಪ್ರತಿಭೆಯಾದ ಪ್ರೊ.ಸಿ.ಪಿ.ಕೆ ಅವರು ದೊಡ್ಡ ವಿದ್ವಾಂಸರ ಪರಂಪರೆಗೆ ಸೇರಿದವರು. ಕುವೆಂಪು, ಜಿಎಸ್‌ಎಸ್ ಪರಂಪರೆಯನ್ನು ಬಳಸಿಕೊಂಡು ನಡೆ-ನುಡಿಯಲ್ಲಿ ಪರಿಶುದ್ಧತೆ ಉಳಿಸಿಕೊಂಡವರು. ಜಾತ್ಯತೀತ ಮನಸ್ಸು ಹೊಂದಿರುವ ಪ್ರೊ.ಸಿ.ಪಿ.ಕೆ ಅವರು ಹಾಸ್ಯ ಪ್ರಜ್ಞೆಯುಳ್ಳವರು ಜೊತೆಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಇವರು ಮಾಡಿದ ಕೆಲಸ ಅಪಾರ ಅಲ್ಲದೆ ಗೋಕಾಕ್ ಚಳುವಳಿಯಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕಾಗಿ ಮಾಡಿದ ಹೋರಾಟದಲ್ಲಿ ಪ್ರೊ. ಸಿ.ಪಿ.ಕೆ ಅವರು ಪ್ರಮುಖಪಾತ್ರ ವಹಿಸಿದ್ದರು. ಇವರ ಸಾಧನೆಗೆ ಪಂಪ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ ಎಂದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆರ್.ರಮೇಶ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ, ಶೈಕ್ಷಣಿಕ ಡೀನ್ ಡಾ.ಶ್ರೀಧರ ಹೆಚ್, ಮಂದಾರ ವಾರ್ಷಿಕ ಸಂಚಿಕೆಯ ಸಂಪಾದಕ ಎಂ.ವೀಣಾ, ವಿದ್ಯಾರ್ಥಿಗಳಾದ ಸುಪ್ರೀತ್ ಎಂ ಭಾರಧ್ವಜ್, ಬೋಧಕ ವರ್ಗ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.